ಬಿಎಸ್ಪಿ ನಾಯಕನ ಗುಂಡಿಕ್ಕಿ ಹತ್ಯೆ

Update: 2018-05-19 13:01 GMT

ಲಕ್ನೋ, ಮೇ 19:  ಅಪರಿಚಿತ ದುಷ್ಕರ್ಮಿಗಳ ತಂಡವೊಂದು ಬಹುಜನ ಸಮಾಜ ಪಕ್ಷದ ಪ್ರಧಾನ ಕಾರ್ಯದರ್ಶಿ ಖುಂಟಿ ಯಾದವ್ ಗೆ ಗುಂಡಿಕ್ಕಿರುವ ಘಟನೆ ಬಕ್ಸರ್ ನಗರದಲ್ಲಿ ನಡೆದಿದೆ. ಯಾದವ್ ರ ಪುತ್ರ ಯಶವಂತ್ ಕುಮಾರ್ ಗಂಭೀರ ಗುಂಡೇಟಿನ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಘಟನೆಯ ಸುದ್ದಿ ಹರಡುತ್ತಿದ್ದಂತೆಯೇ ಪಕ್ಷದ ಬೆಂಬಲಿಗರು ಬಕ್ಸರ್-ರೊಹ್ತಾಸ್ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದರಲ್ಲದೆ ಕೊಲೆಗಾರರನ್ನು ಕೂಡಲೇ ಬಂಧಿಸುವಂತೆ ಪೊಲೀಸರನ್ನು ಆಗ್ರಹಿಸಿದ್ದಾರೆ. ಯಾದವ್ ಕುಟುಂಬಕ್ಕೆ ಸೂಕ್ರ ರಕ್ಷಣೆಯ ಬೇಡಿಕೆಯನ್ನೂ ಅವರು ಮುಂದಿಟ್ಟಿದ್ದಾರೆ. ಶನಿವಾರ ಯಶವಂತ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಲ್ಲಿ ಬಿಎಸ್‍ಪಿ ಬೆಂಬಲಿಗರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆದಿದೆ.

ಕುಮಾರ್ ಮತ್ತು ಯಾದವ್ ಶುಕ್ರವಾರ ರಾತ್ರಿ ತಮ್ಮ ಔಷಧಿ ಅಂಗಡಿಯನ್ನು ಮುಚ್ಚಿ ಮನೆಯತ್ತ ಬರುತ್ತಿದ್ದಾಗ ಘಟನೆ ನಡೆದಿದೆ. ಅವರ ವಾಹನ ಇಟಧಿ ರೈಲ್ವೆ ಹಳಿ ಸಮೀಪ ಬರುತ್ತಿದ್ದಂತೆ ನಾಲ್ಕು ಮಂದಿ ಅವರನ್ನು ಅಡ್ಡಗಟ್ಟಿ ಏಕಾಏಕಿ ಗುಂಡು ಹಾರಾಟ ನಡೆಸಿದ್ದರು. ಯಾದವ್ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ.

ತಂದೆ ಮಗನ ಬಳಿ ಪರವಾನಗಿ ಹೊಂದಿದ ರಿವಾಲ್ವರ್ ಇದ್ದರೂ ಅದನ್ನು ಉಪಯೋಗಿಸುವಷ್ಟು ಸಮಯ ಅವರ ಬಳಿ ಇರಲಿಲ್ಲ, ಇಲ್ಲಿಯ ತನಕ ಯಾರನ್ನೂ ಬಂಧಿಸಲಾಗಿಲ್ಲ. ಹಳೆ ವೈಷಮ್ಯವೊಂದು ಈ ಘಟನೆಗೆ ಕಾರಣವಾಗಿರಬಹುದೆಂದು ಪೋಲಿಸರು ಶಂಕಿಸಿದ್ದಾರೆ. ಬಕ್ಸರ್ ನಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಹತ್ಯೆಗೀಡಾದ ಎರಡನೇ ಬಿಎಸ್‍ಪಿ ನಾಯಕ ಯಾದವ್ ಆಗಿದ್ದಾರೆ. 2016ರಲ್ಲಿ ಮಥಿಲ ಗ್ರಾಮದಲ್ಲಿ  ಪಕ್ಷದ ಇನ್ನೊಬ್ಬ ನಾಯಕ ಪ್ರದೀಪ್ ಚೌಧುರಿ ಅವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News