ನಾಲ್ವರು ಹಿರಿಯ ಸುಪ್ರೀಂ ನ್ಯಾಯಾಧೀಶರ ವಿರುದ್ಧ ಮಾಜಿ ಸಿಜೆಐ ಠಾಕೂರ್ ಟೀಕೆ
ಹೊಸದಿಲ್ಲಿ,ಮೇ 19: ಸರ್ವೋಚ್ಚ ನ್ಯಾಯಾಲಯದ ನಾಲ್ವರು ಅತ್ಯಂತ ಹಿರಿಯ ನ್ಯಾಯಾಧೀಶರು ಜ.12ರಂದು ನಡೆಸಿದ್ದ ವಿವಾದಾತ್ಮಕ ಸುದ್ದಿಗೋಷ್ಠಿಯ ಕುರಿತು ಶನಿವಾರ ಇಲ್ಲಿ ಮಾತನಾಡಿದ ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಟಿ.ಎಸ್.ಠಾಕೂರ್ ಅವರು,ಈ ನ್ಯಾಯಾಧೀಶರು ತಮ್ಮ ಸಾಂಸ್ಥಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹೊರಗಿನ ನೆರವು ಕೋರುವ ಅಗತ್ಯವಿರಲಿಲ್ಲ ಎಂದು ಹೇಳಿದರು.
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ಆರೋಪಗಳನ್ನು ಹೊರಿಸುವ ಮೂಲಕ ಅವರ ವಿರುದ್ಧ ಬಂಡೆದಿದ್ದ ನಾಲ್ವರು ಅತ್ಯಂತ ಹಿರಿಯ ನ್ಯಾಯಾಧೀಶರಾದ ಜೆ.ಚೆಲಮೇಶ್ವರ,ರಂಜನ ಗೊಗೊಯ್,ಎಂ.ಬಿ.ಲೋಕೂರ್ ಮತ್ತು ಕುರಿಯನ್ ಜೋಸೆಫ್ ಅವರು ನಡೆಸಿದ್ದ ಸುದ್ದಿಗೋಷ್ಠಿಯನ್ನು ‘ಆತಂಕಕಾರಿ’ಎಂದು ಬಣ್ಣಿಸಿದ ಅವರು,ಇದು ಸರ್ವೋಚ್ಚ ನ್ಯಾಯಾಲಯದ ಪರಿಮಿತಿಯಲ್ಲಿ ಬಗೆಹರಿಯಬೇಕಾಗಿದ್ದ ವಿಷಯಗಳ ಬಗ್ಗೆ ಚರ್ಚಿಸಲು ಮಾಧ್ಯಮಗಳು ಮತ್ತು ರಾಜಕಾರಣಿಗಳಿಗೆ ಅವಕಾಶವನ್ನೊದಗಿಸಿತ್ತು ಎಂದರು.
ತಾವೇ ಬಗೆಹರಿಸಿಕೊಳ್ಳಬಹುದಾಗಿದ್ದ ಸಮಸ್ಯೆಗಳನ್ನು ದೇಶವು ಇತ್ಯರ್ಥ ಗೊಳಿಸಬೇಕೆಂದು ನ್ಯಾಯಾಧೀಶರು ನಿರ್ಧರಿಸಿದಾಗ ಅವರನ್ನು ಗಮನಿಸುವ ಯಾರೇ ಆದರೂ ಉನ್ನತ ನ್ಯಾಯಾಂಗವು ತನ್ನ ಕಾರ್ಯ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅಸಮರ್ಥವಾಗಿದೆ ಮತ್ತು ಅದನ್ನು ಸಾರ್ವಜನಿಕರ ಬಳಿಗೆ ಒಯ್ಯುತ್ತಿದೆ ಎಂಬ ಭಾವನೆಯಿಂದ ಆತಂಕಗೊಳ್ಳುತ್ತಾರೆ ಎಂದು ಠಾಕೂರ್ ಹೇಳಿದರು. ಅವರು ದಿಲ್ಲಿ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಕೈಲಾಷ್ ಗಂಭೀರ್ ಅವರು ಸ್ಥಾಪಿಸಿರುವ ಎನ್‌ಜಿಒ ಗ್ಲೋಬಲ್ ಜ್ಯೂರಿಸ್ಟ್ಸ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ನ್ಯಾಯಾಂಗದ ಸ್ವಾತಂತ್ರ್ಯ’ಕುರಿತು ಮಾತನಾಡುತ್ತಿದ್ದರು.
ವಿವಾದಿತ ಸುದ್ದಿಗೋಷ್ಠಿಯು ನ್ಯಾ.ಚೆಲಮೇಶ್ವರ ಅವರ ನಿವಾಸದಲ್ಲಿ ನಡೆದಿದ್ದು,ಸರ್ವೋಚ್ಚ ನ್ಯಾಯಾಲಯದ ಬೇಸಿಗೆ ರಜೆಯ ಅವಧಿಯಲ್ಲಿ ಜೂ.22ರಂದು ನಿವೃತ್ತರಾಗಲಿರುವ ಅವರು ತನ್ನ ಕರ್ತವ್ಯದ ಕೊನೆಯ ದಿನವಾಗಿದ್ದ ಶುಕ್ರವಾರ ಮು.ನ್ಯಾ.ಮಿಶ್ರಾ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದರು.