×
Ad

ಏಷ್ಯಾದ ಅತ್ಯಂತ ಉದ್ದವಾದ ಝೋಜಿಲಾ ಸುರಂಗದ ಕಾಮಗಾರಿಗೆ ಪ್ರಧಾನಿ ಚಾಲನೆ

Update: 2018-05-19 20:14 IST

ಲೇಹ್(ಜಮ್ಮು-ಕಾಶ್ಮೀರ),ಮೇ 19: 6,800 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ,ಏಷ್ಯಾದಲ್ಲಿಯೇ ಅತ್ಯಂತ ಉದ್ದವಾದ ಝೋಜಿಲಾ ಸುರಂಗ ಮಾರ್ಗದ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಿದರು. ರಾಜ್ಯಕ್ಕೆ ತನ್ನ ಒಂದು ದಿನದ ಭೇಟಿಯ ಅವಧಿಯಲ್ಲಿ ಒಟ್ಟು 25,000 ಕೋ.ರೂ.ಗಳ ಯೋಜನೆಗಳ ಲೋಕಾರ್ಪಣೆ ಹಾಗೂ ಶಿಲಾನ್ಯಾಸಗಳನ್ನು ನೆರವೇರಿಸಿದ ಅವರು,ಇದು ಜಮ್ಮು-ಕಾಶ್ಮೀರದ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರದ ಬದ್ಧತೆಯನ್ನು ಸೂಚಿಸುತ್ತಿದೆ ಎಂದು ಹೇಳಿದರು.

ಇಲ್ಲಿ ಬೌದ್ಧರ ಆಧ್ಯಾತ್ಮಿಕ ಗುರು 19ನೇ ಕುಷೊಕ್ ಬಕುಲ ರಿಂಪೋಷೆ ಅವರ ಜನ್ಮ ಶತಾಬ್ದಿ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದ ಮೋದಿ ಅವರು,ಲಡಾಖ್ ಪ್ರದೇಶವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ರಿಂಪೋಷೆಯವರ ಕನಸನ್ನು ನನಸಾಗಿಸುವಲ್ಲಿ ಈ ಸುರಂಗ ಮಾರ್ಗವು ನೆರವಾಗಲಿದೆ ಎಂದರು.

11,578 ಅಡಿ ಎತ್ತರದಲ್ಲಿ ಶ್ರೀನಗರ-ಕಾರ್ಗಿಲ್-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಝೋಜಿಲಾ ಪಾಸ್ ಅನ್ನು ಭಾರೀ ಹಿಮಪಾತದ ಸಂದರ್ಭಗಳಲ್ಲಿ ಮುಚ್ಚಲಾಗುತ್ತದೆ ಮತ್ತು ಲಡಾಖ್ ಪ್ರದೇಶವು ಕಾಶ್ಮೀರ ಪ್ರದೇಶದೊಂದಿಗೆ ಸಂಪರ್ಕವನ್ನು ಕಡಿದುಕೊಳ್ಳುತ್ತದೆ.

ಲಡಾಖ್ ಪ್ರದೇಶದ ಇತಿಹಾಸ ಮತ್ತು ಸಂಪ್ರದಾಯವನ್ನು ಜಗತ್ತಿಗೆ ಬಿಂಬಿಸುವ ವರ್ಚ್ಯುವಲ್ ಮ್ಯೂಸಿಯಂ ಅನ್ನು ಸೃಷ್ಟಿಸುವುದಾಗಿಯೂ ಮೋದಿ ಈ ಸಂದರ್ಭದಲ್ಲಿ ಪ್ರಕಟಿಸಿದರು.

ರಿಂಪೋಷೆ ಅವರಿಗೆ ಪುಷ್ಪನಮನಗಳನ್ನು ಸಲ್ಲಿಸಿದ ಮೋದಿ,ಸ್ಥಳೀಯ ಭಾಷೆಯಲ್ಲಿ ತನ್ನ ಭಾಷಣವನ್ನು ಆರಂಭಿಸಿದಾಗ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರು ಅದನ್ನು ಸ್ವಾಗತಿಸಿದರು.

ಝೋಜಿಲಾ ಸುರಂಗದ ಕಾಮಗಾರಿಯ ನಾಮಫಲಕವನ್ನು ಅನಾವರಣಗೊಳಿಸಿದ ಮೋದಿ,ಇದು ಬರಿಯ ಸುರಂಗ ಮಾತ್ರವಲ್ಲ,ಆಧುನಿಕ ಯುಗದ ಅದ್ಭುತವಾಗಲಿದೆ ಎಂದರು.

ಕುತುಬ್ ಮಿನಾರ್‌ಗಿಂತ ಏಳು ಪಟ್ಟು ಹೆಚ್ಚು ಎತ್ತರದ ಗೋಪುರದ ಮೂಲಕ ಸುರಂಗದಲ್ಲಿನ ಕಾರ್ಬನ್ ಡೈಯಾಕ್ಸೈಡ್‌ನ್ನು ನಿವಾರಣೆಯಾಗಲಿದೆ ಎಂದರು. ಈ ಸುರಂಗವು ಪ್ರದೇಶದಲ್ಲಿ ಸಂಪರ್ಕವನ್ನು ಕಲ್ಪಿಸುವ ಜೊತೆಗೆ ಸ್ಥಳೀಯ ಯುವಜನರಿಗೆ ಉದ್ಯೋಗಗಳನ್ನು ಒದಗಿಸಲಿದೆ ಎಂದ ಅವರು,ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯಸರಕಾರಗಳು ಒಂದಾಗಿ ಶ್ರಮಿಸುತ್ತಿವೆ ಎಂದರು.

ಲಡಾಖ್ ಪ್ರದೇಶದಲ್ಲಿ ಕೃಷಿ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳಿವೆ. ರಾಜ್ಯವು ಸವಾಂಗೀಣ ಆರೋಗ್ಯ ರಕ್ಷಣೆಯನ್ನು ಹೆಚ್ಚಿಸುವಲ್ಲಿ ಪ್ರಮಖ ಪಾತ್ರವನ್ನು ನಿರ್ವಹಿಸಬಹುದಾಗಿದೆ,ಅಲ್ಲದೆ ಸ್ಥಳೀಯವಾಗಿ ಸುಗಂಧ ದ್ರವ್ಯ ಉದ್ಯಮವನ್ನು ಆರಂಭಿಸಬಹುದಾಗಿದೆ ಎಂದು ಮೋದಿ ಹೇಳಿದರು.

ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ ಅವರು,ತಾನು ಅಧಿಕಾರ ವಹಿಸಿಕೊಂಡಾಗ ಸಾವಿರಾರು ಗ್ರಾಮಗಳು ವಿದ್ಯುತ್ ಸಂಪರ್ಕದಿಂದ ವಂಚಿತವಾಗಿದ್ದವು. ತನ್ನ ಸರಕಾರವು ವಿದ್ಯುದೀಕರಣ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಂಡು ಈ ಗ್ರಾಮಗಳನ್ನು ಅಂಧಕಾರದಿಂದ ಮುಕ್ತಗೊಳಿಸಿದೆ. ಒಂದೂವರೆ ವರ್ಷಗಳಲ್ಲಿ ಸುಮಾರು ನಾಲ್ಕು ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸಲಾಗುವುದು ಎಂದರು.

ರಿಂಪೋಷೆ ಅವರು ಮಹಾಯಾನ ಬೌದ್ಧ ಪಂಥದ ವಿದ್ವಾಂಸರಾಗಿದ್ದು, ಸ್ಪಿಟುಕ್ ಗೊಂಪಾದ ಮುಖ್ಯ ಅರ್ಚಕರಾಗಿದ್ದರು. 2003ರಲ್ಲಿ ನಿಧನರಾದ ಅವರು 1951ರಲ್ಲಿ ಜಮ್ಮು-ಕಾಶ್ಮೀರ ವಿಧಾನಸಭೆಯ ಶಾಸಕರಾಗಿ ಆಯ್ಕೆಯಾಗಿದ್ದರು ಮತ್ತು ಆಗಿನ ರಾಜ್ಯ ಸರಕಾರದಲ್ಲಿ ಸಚಿವರಾಗಿದ್ದರು. 1989ರಲ್ಲಿ ಅವರು ಮಂಗೋಲಿಯಾದಲ್ಲಿ ಭಾರತೀಯ ರಾಯಭಾರಿಯಾಗಿ ನೇಮಕಗೊಳ್ಳುವ ಮೂಲಕ ವಿಶ್ವದ ಮೊದಲ ಮತ್ತು ಏಕೈಕ ಬೌದ್ಧ ಸನ್ಯಾಸಿ ರಾಯಭಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

14.15 ಕಿ.ಮೀ.ಉದ್ದದ ಝೋಜಿಲಾ ಸುರಂಗ ಮಾರ್ಗವು ದ್ವಿಪಥಗಳನ್ನು ಹೊಂದಿದ್ದು, ಝೋಜಿಲಾ ಪಾಸ್ ಮೂಲಕ ಮೂರೂವರೆ ಗಂಟೆ ಪ್ರಯಾಣದ ಅವಧಿಯನ್ನು 15 ನಿಮಿಷಗಳಿಗೆ ತಗ್ಗಿಸಲಿದೆ.

 ಸುರಂಗದ ನಿರ್ಮಾಣ ಕಾಮಗಾರಿಯಲ್ಲಿ ಶೇ.90ರಷ್ಟು ಉದ್ಯೋಗಗಳನ್ನು ಸ್ಥಳೀಯ ಯುವಜನರಿಗೆ ನೀಡಲಾಗುವುದು ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತನ್ನ ಭಾಷಣದಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News