ಕ್ಯಾಂಪಸ್‌ನಲ್ಲಿ ಪ್ಲಾಸ್ಟಿಕ್ ಕಪ್, ಬಾಟಲ್ ಗಳಿಗೆ ನಿಷೇಧ: ವಿವಿಗಳಿಗೆ ಯುಜಿಸಿ ನಿರ್ದೇಶ
ಹೊಸದಿಲ್ಲಿ,ಮೇ 19: ತಮ್ಮ ಕ್ಯಾಂಪಸ್‌ಗಳಲ್ಲಿ ಪ್ಲಾಸ್ಟಿಕ್ ಕಪ್,ಲಂಚ್ ಪ್ಯಾಕೆಟ್,ಹೀರುಗೊಳವೆ, ಬಾಟಲ್ ಮತ್ತು ಬ್ಯಾಗ್‌ಗಳ ಬಳಕೆಯನ್ನು ನಿಷೇಧಿಸುವಂತೆ ವಿಶ್ವವಿದ್ಯಾನಿಲಯ ಅನುದಾನ ಆಯೋಗ(ಯುಜಿಸಿ)ವು ಎಲ್ಲ ವಿಶ್ವವಿದ್ಯಾನಿಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶ ನೀಡಿದೆ.
ಭಾರತವು ಈ ವರ್ಷದ ವಿಶ್ವ ಪರಿಸರ ದಿನದ ಸಮಾರಂಭಗಳ ಆತಿಥೇಯ ರಾಷ್ಟ್ರವಾಗಿದ್ದು,‘ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಗಟ್ಟಿ’ ಎನ್ನುವುದು ಈ ಅತ್ಯಂತ ದೊಡ್ಡ ವಿಶ್ವಸಂಸ್ಥೆ ನೇತೃತ್ವದ ಪರಿಸರ ಕಾರ್ಯಕ್ರಮದ ಧ್ಯೇಯವಾಕ್ಯವಾಗಿರಲಿದೆ ಎಂದು ಸುತ್ತೋಲೆಯೊಂದರಲ್ಲಿ ಕೇಂದ್ರ ಪರಿಸರ ಸಚಿವಾಲಯವು ತಿಳಿಸಿರುವ ಹಿನ್ನೆಲೆಯಲ್ಲಿ ಯುಜಿಸಿಯ ಈ ನಿರ್ದೇಶ ಹೊರಬಿದ್ದಿದೆ.
ಸ್ವಚ್ಛ ಭಾರತ ಅಭಿಯಾನದ ಅಡಿ ನಗರಸಭಾ ವ್ಯಾಪ್ತಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಕುರಿತು ಜಾಗ್ರತಿ ಕಾರ್ಯಕ್ರಮಗಳು ಮತ್ತು ಸ್ವಚ್ಛತಾ ಆಂದೋಲನಗಳನ್ನು ಕೈಗೊಳ್ಳುವಂತೆಯೂ ಯುಜಿಸಿ ವಿವಿಗಳಿಗೆ ಸೂಚಿಸಿದೆ.
ಜೂ.5ರಂದು ನಡೆಯಲಿರುವ ವಿಶ್ವ ಪರಿಸರ ದಿನಾಚರಣೆಯ ಹಿನ್ನೆಲೆಯಲ್ಲಿ ತಮ್ಮ ಆವರಣಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವಂತೆ ಶಾಲೆಗಳಿಗೂ ಸೂಚಿಸಿರುವ ಪರಿಸರ ಸಚಿವಾಲಯವು,ದೇಶಾದ್ಯಂತ 24 ಬೀಚ್‌ಗಳು ಮತ್ತು ಅಷ್ಟೇ ಸಂಖ್ಯೆಯ ನದಿತೀರಗಳು ಹಾಗೂ ಸರೋವರಗಳ ಸ್ವಚ್ಛತಾ ಕಾರ್ಯಕ್ಕಾಗಿ 19 ತಂಡಗಳನ್ನು ರಚಿಸಿದೆ.