ಸಿಎಂ ಹುದ್ದೆಗೆ ಯಡಿಯೂರಪ್ಪ ರಾಜೀನಾಮೆ: ಸಿಹಿ ಹಂಚಿ ಕಾಂಗ್ರೆಸ್, ಜೆಡಿಎಸ್ ಸಂಭ್ರಮಾಚರಣೆ
ಮಂಗಳೂರು, ಮೇ 19: ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸದೆ ರಾಜೀನಾಮೆ ನೀಡಿರುವುದರಿಂದ ಮಂಗಳೂರಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಸಿಹಿ ತಿಂಹಿ ಹಂಚಿ ಸಂಭ್ರಮಿಸಿದರು.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಶಾಸಕ ಲೋಬೊ ಪರ ಘೋಷಣೆಗಳನ್ನು ಕೂಗಿದರು. ಅಲ್ಲದೆ, ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಜೆ.ಆರ್.ಲೋಬೊ ಅವರು, ಅಧಿಕಾರದ ಲಾಲಸೆಯಿಂದ ಬಿಜೆಪಿಗರು ಕುದುರೆ ವ್ಯಾಪಾರದಲ್ಲಿ ತೊಡಗಿ ಶಾಸಕರನ್ನು ಖರೀದಿ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಸರಕಾರ ರಚನೆಗೆ ನಿರ್ದಿಷ್ಟ ಬಹುಮತ ಇಲ್ಲದಿದ್ದರೂ ಪ್ರಮಾಣ ವಚನ ಸ್ವೀಕರಿಸಿ ಬಹುಮತ ಸಾಬೀತುಪಡಿಸುತ್ತೇವೆ ಎಂದು ಹೇಳಿರುವುದು ಇಂತಹ ಕುದುರೆ ವ್ಯಾಪಾರದ ಮೂಲಕ ಬಹುಮತ ಸಾಬೀತುಪಡಿಸಬಹುದೆಂಬ ದುರಾಲೋಚನೆಯಿಂದ. ಇಂತಹ ಸರಕಾರಕ್ಕೆ ಯಾವ ನೈತಿಕತೆ ಇಲ್ಲ ಎಂದರು.
ಡಿಸಿಸಿ ಉಪಾಧ್ಯಕ್ಷ ಸದಾಶಿವ ಉಳ್ಳಾಲ್, ಕಾರ್ಪೊರೇಟರ್ ಆಶಾ ಡಿಸಿಲ್ವ, ನಝೀರ್ ಬಜಾಲ್, ಆರಿಫ್ ಬಂದರ್, ನೀರಜ್‌ಚಂದ್ರ ಪಾಲ್,ಅಬ್ದುಲ್ಲಾ ಬಿನ್ನು, ರಮಾನಂದ ಪೂಜಾರಿ, ಬಿ.ಎಂ. ಭಾರತಿ, ಸವದ್ ಸುಳ್ಯ, ಪದ್ಮನಾಭ ಅಮೀನ್, ಯೂಸುಫ್ ಉಚ್ಚಿಲ್, ಅನ್ಸಾರ್ ಶಾಲಿಮಾರ್ ಮತ್ತಿತರರು ಉಪಸ್ಥಿತರಿದ್ದರು.
ನಗರದ ಬೆಂದೂರ್‌ವೆಲ್‌ನಲ್ಲಿರುವ ಜೆಡಿಎಸ್ ಕಚೇರಿ ಮುಂಭಾಗ ಜೆಡಿಎಸ್ ಮುಖಂಡರ ಸಹಿತ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. ಬೆಂದೂರ್‌ವೆಲ್ ಜಂಕ್ಷನ್‌ನಲ್ಲಿ ವಾಹನಗಳ ಸವಾರರಿಗೆ, ಪ್ರಯಾಣಿಕರಿಗೆ ಸಿಹಿ ತಿಂಡಿ ವಿತರಿಸುವ ಮೂಲಕ ಸಂಭ್ರಮಿಸಿದರು.ಈ ಸಂದರ್ಭ ಮಾತನಾಡಿದ ಜೆಡಿಎಸ್ ಮಂಗಳೂರು ದಕ್ಷಿಣ ಕ್ಷೇತ್ರದ ಅಧ್ಯಕ್ಷ ವಸಂತ ಪೂಜಾರಿ ಮಾತನಾಡಿ, ಯಡಿಯೂರಪ್ಪ ಅವರು ಬಹುತಮ ಇಲ್ಲದಿದ್ದರೂ ಮುಖ್ಯಮಂತ್ರಿ ಪ್ರಮಾಣ ವಚನ ಮಾಡಿ ಕುದರೆ ವ್ಯಾಪಾರದ ಮೂಲಕ ಶಾಸಕರ ಖರೀದಿಯಲ್ಲಿ ತೊಡಗಿದ್ದುದು ನೀಚಿಕೆಗೇಡು ವಿಷಯ. ಯಡಿಯೂರಪ್ಪರಿಗೆ ಬಹುಮತವನ್ನು ಸಾಬೀತುಪಡಿಸಲು ಸಾಧ್ಯವಾಗದಿರುವುದು ಪ್ರಜಾಪ್ರಭುತ್ವಕ್ಕೆ ಸಂದ ಜಯವಾಗಿದೆ. ಎಚ್.ಡಿ.ಕುಮಾರಸ್ವಾಮಿ ಅವರ ಕನಸು ನನಸಾಗಿದ್ದು, ಮುಂದಿನ ದಿನಗಳಲ್ಲಿ ರೈತ ಪರ, ಕಾರ್ಮಿಕರ ಪರ ಆಡಳಿತ ನೀಡುತ್ತಾರೆಂಬ ವಿಶ್ವಾಸ ಇದೆ ಎಂದರು.
ಕುಮಾರಸ್ವಾಮಿ ಅವರ ಆಡಳಿತಾವಧಿಯಲ್ಲಿ ದ.ಕ. ಜಿಲ್ಲೆಯಲ್ಲಿ ಕೋಮು ಸೌಹಾರ್ದ ವಾತಾವರಣ ಸಹಿತ ಜನರು ನೆಮ್ಮದಿಯಿಂದ ಬದುಕುವ ವಾತಾವರಣ ಸೃಷ್ಟಿಯಾಗಬೇಕು ಎಂದರು.ಜೆಡಿಎಸ್ ರಾಜ್ಯ ಕಾರ್ಯದರ್ಶಿ ಗೋಪಾಲಕೃಷ್ಣ ಅತ್ತಾವರ, ದ.ಕ. ಜಿಲ್ಲಾ ಕಾರ್ಯಾಧ್ಯಕ್ಷ ಎಂ.ರಾಮಗಣೇಶ್, ರತ್ನಾಕರ ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಪಿ.ಪುಷ್ಪರಾಜನ್. ಎಸ್‌ಸಿಎಸ್‌ಟಿ ಘಟಕದ ದ.ಕ. ಜಿಲ್ಲಾಧ್ಯಕ್ಷ ಕನಕದಾಸ ಕೂಳೂರು, ಕಾರ್ಪೊರೇಟರ್ ಅಝೀಝ್ ಕುದ್ರೋಳಿ, ರಮೀಝಾ ಬಾನು, ಯುವ ಜನತಾದಳ ಮಹಾ ಪ್ರಧಾನ ಕಾರ್ಯದರ್ಶಿ ಮಧುಸೂಧನ್ ಗೌಡ, ಅಲ್ಪಸಂಖ್ಯಾತ ಘಟಕ ನಗರಾಧ್ಯಕ್ಷ ಮುನೀರ್ ಮುಕ್ಕಚ್ಚೇರಿ, ಮಹಿಳಾ ಘಟಕ ಅಧ್ಯಕ್ಷೆ ಸುಮತಿ ಹೆಗ್ಡೆ, ವೀಣಾ ಶೆಟ್ಟಿ, ಕವಿತಾ, ಭಾರತಿ ಪುಷ್ಪರಾಜನ್, ಈಝಾ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.