×
Ad

ಸಮ್ಮಿಶ್ರ ಸಮಾಜ ಹೊಂದಿರುವ ಭಾರತ ವಾಗ್ವಾದಗಳ ದೇಶ: ಅರವಿಂದ ಚೊಕ್ಕಾಡಿ

Update: 2018-05-19 21:18 IST

ಉಡುಪಿ, ಮೇ 19: ಸಮ್ಮಿಶ್ರ ಸಮಾಜ ಹೊಂದಿರುವ ಭಾರತದಲ್ಲಿ ಪರಸ್ಪರ ವಿರೋಧಾಭಾಸಗಳ, ಗೊಂದಲಗಳ ಮತ್ತು ವಿರುದ್ಧ ಅರ್ಥಗಳ ಮುಖಾಮುಖಿ ಗಳು ಮತ್ತು ವಾಗ್ವಾದಗಳು ಸುಮಾರು 3-4 ಸಾವಿರ ವರ್ಷಗಳಿಂದ ನಿರಂತರ ವಾಗಿ ನಡೆದುಕೊಂಡು ಬಂದಿದೆ ಎಂದು ಸಾಹಿತಿ ಅರವಿಂದ ಚೊಕ್ಕಾಡಿ ಹೇಳಿದ್ದಾರೆ.

ಕಿನ್ನಿಗೋಳಿಯ ಅನಂತ ಪ್ರತಿಭಾ ಪ್ರಕಾಶನ ಹಾಗೂ ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಜಂಟಿ ಆಶ್ರಯದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಆವರಣದಲ್ಲಿರುವ ಧ್ವನ್ಯಾಲೋಕದಲ್ಲಿ ಉದಯ ಕುಮಾರ್ ಹಬ್ಬು ಅವರ ‘ಪ್ರಾಚೀನ ಭಾರತದ ತತ್ವದರ್ಶನಗಳು’ ಪುಸ್ತಕವನ್ನು ಶನಿವಾರ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.

ಭಾರತವು ಪುರಾತನ ಕಾಲದಿಂದಲೂ ವಾಗ್ವಾದಗಳ ದೇಶ. ಭಾರತ ಎಂಬುದೇ ವಿಶ್ವದ ಅತ್ಯಂತ ದೊಡ್ಡ ಸಮ್ಮಿಶ್ರ. ಎಲ್ಲ ಸಮ್ಮಿಶ್ರಗಳ ಸ್ವರೂಪ ಈ ಪುಸ್ತಕದಲ್ಲಿ ಸಿಗುತ್ತದೆ. ಆ ಮೂಲಕ ನಾವು ಕೂಡ ಒಂದು ವಾಗ್ವಾದ ರೂಪಿ ಯಾದ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಸಾಮಾಜಿಕ ಪ್ರಜಾಪ್ರಭುತ್ವ ಎಂಬುದು ವಾಗ್ವಾದದ ರೂಪದಲ್ಲೇ ಇರುತ್ತದೆ ಎಂದು ಅವರು ತಿಳಿಸಿದರು.

ಜ್ಞಾನದ, ವಿಕಾಸದ ಮೂಲ ಬೆರಗು ಮತ್ತು ಕುತೂಹಲದ ದೃಷ್ಟಿಕೋನ. ಅದು ಎರಡೂ ಇಲ್ಲದಿದ್ದರೆ ಜ್ಞಾನದ ವಿಕಾಸ ಸಾಧ್ಯವಿಲ್ಲ ಎಂದ ಅವರು, ವಿದ್ವತ್ ವಲಯ ಕೂಡ ಇಂದು ರಾಜಕೀಯ ಪಕ್ಷಗಳ ಬೌಧಿಕ ಕಾರ್ಯಕರ್ತರಾಗಿ ಪರಿವರ್ತನೆ ಆಗುತ್ತಿದೆ. ಇಂದು ಕೇಳುವುದಕ್ಕಿಂತ ಹೇಳುವುದಕ್ಕೆ ಎಲ್ಲರಿಗೂ ಆಸಕ್ತಿ ಇರುವುದು ಎಂದರು.

ಉದಯ ಕುಮಾರ್ ಹಬ್ಬು ಅವರ ಮಕ್ಕಳ ಕಾದಂಬರಿ ‘ಲುಂಡೀರಿಯ’ ಪುಸ್ತಕವನ್ನು ಬಿಡುಗಡೆಗೊಳಿಸಿದ ಕನ್ನಡ ಸಾಹಿತ್ಯ ಪರಿಷತ್‌ನ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ನಾವು ಮಕ್ಕಳ ಬಾಲ್ಯವನ್ನು ಕಸಿದು ಕೊಳ್ಳುತ್ತಿದ್ದೇವೆ. ಪ್ರಾಣಿಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದಂತೆ ಇಂದು ನಾವು ನಮ್ಮ ಮಕ್ಕಳನ್ನು ಕಟ್ಟಿ ಹಾಕುತ್ತಿದ್ದೇವೆ. ಮಕ್ಕಳಲ್ಲಿ ಓದುವ ಆಸಕ್ತಿ ಬೆಳೆಸಬೇಕು. ಇದರಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚು ಎಂದರು.

ಅಧ್ಯಕ್ಷತೆಯನ್ನು ವಿಮರ್ಶಕ ಡಾ.ಎಂ.ಪ್ರಭಾಕರ ಜೋಶಿ ವಹಿಸಿದ್ದರು. ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ಸ್ವಾಗತಿಸಿದರು. ಲೇಖಕ ಉದಯ ಕುಮಾರ್ ಹಬ್ಬು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ಆಕೃತಿ ಪ್ರಿಂಟ್ಸ್‌ನ ಕಲ್ಲೂರ್ ನಾಗೇಶ್ ವಂದಿಸಿದರು. ಸುಷ್ಮಿತಾ ಎ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News