ಸಂವಿಧಾನ ಉಲ್ಲಂಘಿಸಿರುವ ರಾಜ್ಯಪಾಲರನ್ನು ವಜಾಗೊಳಿಸಿ: ಜಿ.ರಾಜಶೇಖರ್
ಉಡುಪಿ, ಮೇ 19: ರಾಜ್ಯಪಾಲರು ಸಂವಿಧಾನವನ್ನು ಉಲ್ಲಂಘಿಸಿ ಬಹು ಮತ ಇಲ್ಲದ ರಾಜಕೀಯ ಪಕ್ಷವೊಂದಕ್ಕೆ ಸರಕಾರ ರಚಿಸಲು ಆಹ್ವಾನ ನೀಡುವ ಮೂಲಕ ಸಂವಿಧಾನದ ಸಂಹಿತೆ ಮತ್ತು ಪರಂಪರೆಯನ್ನು ಉಲ್ಲಂಘಿಸಿದ್ದಾರೆ. ಅಲ್ಲದೆ ಆ ಪಕ್ಷಕ್ಕೆ ಬಹುಮತ ಸಾಬೀತು ಪಡಿಸಲು 15 ದಿನಗಳ ಕಾಲಾವಕಾಶ ನೀಡಿರುವುದು ಕೂಡ ಸರಿಯಲ್ಲ. ಆದುದರಿಂದ ರಾಜ್ಯಪಾಲರೇ ಸಂವಿಧಾನ ವನ್ನು ಉಲ್ಲಂಘಿಸಿರುವುದರಿಂದ ರಾಷ್ಟ್ರಪತಿಗಳು ಅವರನ್ನು ವಜಾ ಮಾಡಬೇಕು ಇಲ್ಲವೇ ರಾಜೀನಾಮೆ ಪಡೆದುಕೊಳ್ಳಬೇಕು ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ಹಿರಿಯ ಚಿಂತಕ ಜಿ.ರಾಜಶೇಖರ್ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶವನ್ನು ಕಾಡುವ ಯಾವ ಮುಖ್ಯ ಸಮಸ್ಯೆಗಳು ಕೂಡ ಈ ಸಲದ ಚುನಾವಣೆ ಯಲ್ಲಿ ಪ್ರಸ್ತಾಪ ಆಗಿಲ್ಲ. ಅದರ ಬದಲು ಮೂರು ಗ್ಯಾಂಗ್‌ಗಳಲ್ಲಿ ಯಾರು ಅಧಿಕಾರಕ್ಕೆ ಬರಬೇಕು ಮತ್ತು ಕರ್ನಾಟಕವನ್ನು ಮುಂದೆ ಯಾರು ಲೂಟಿ ಮಾಡಬೇಕು ಎಂಬುದಕ್ಕೆ ನಡೆದ ಸ್ಪರ್ಧೆಯಾಗಿ ಕಂಡುಬಂದಿದೆ. ಇದಕ್ಕೆ ಆಕ್ಷೇಪ ಮಾಡದಿದ್ದರೆ ನಾವು ಸಂವಿಧಾನಕ್ಕೆ ಅಪಚಾರ ಮಾಡಿದಂತೆ ಆಗುತ್ತದೆ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಪತ್ರಿಕಾಗೋಷ್ಠಿ ನಡೆಸಿದ ವಿಚಾರ ಈ ಚುನಾವಣೆಯಲ್ಲಿ ಮುನ್ನಲೆಗೆ ಬರಲೇ ಇಲ್ಲ. ಆಳುವ ಪಕ್ಷದ ರಾಷ್ಟ್ರಾಧ್ಯಕ್ಷ ಭಾಗಿಯಾಗಿರುವ ಸೋಹಾಬುದ್ದೀನ್ ಶೇಕ್ ಎನ್‌ಕೌಂಟರ್ ಪ್ರಕರಣದ ವಿಚಾ ರಣೆ ಮಾಡುತ್ತಿದ್ದ ನ್ಯಾಯಾಧೀಶರ ಅಕಸ್ಮಿಕ ಸಾವು ಪ್ರಕರಣ, ಅಮಿತ್ ಶಾ ಮಗನ ಭ್ರಷ್ಟಾಚಾರ, ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿದ್ದ ಹಲ್ಲೆಗಳು, ಉತ್ತರ ಪ್ರದೇಶದಲ್ಲಿ ನಡೆದ ಸಾವಿರಾರು ಎನ್‌ಕೌಂಟರ್‌ಗಳು ಈ ಚುನಾವಣೆಯಲ್ಲಿ ಮುಖ್ಯ ವಿಷಯವೇ ಆಗಿಲ್ಲ ಎಂದರು.
ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಹಿಂದೂ ಕಾರ್ಯಕರ್ತರ ಹತ್ಯೆಯ ಪಟ್ಟಿಯನ್ನು ನೀಡಿದ್ದಾರೆ. ಈ ಜಿಲ್ಲೆಯಲ್ಲಿ ರಾಜಕೀಯ ಕಾರಣಕ್ಕೆ ಅಕಸ್ಮಿಕವಾಗಿ ಮೃತಪಟ್ಟ ಮುಸ್ಲಿಮರು ಕೂಡ ಇದ್ದಾರೆ. ಅವರ ಪ್ರಕಾರ ಮುಸ್ಲಿಮರು ಈ ದೇಶದ ಪ್ರಜೆಗಳಲ್ಲವೇ ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಶೋಭಾ ಸ್ಪಷ್ಟನೆ ನೀಡಬೇಕು. ಅಲ್ಲಿಯವರೆಗೆ ಆ ಪಟ್ಟಿಗೆ ಯಾವುದೇ ಅಧಿಕೃತತೆ ಇಲ್ಲ. ಇದು ಸ್ಪಷ್ಟವಾಗಿ ಸಂವಿಧಾನದ ಉಲ್ಲಂಘನೆ ಎಂದರು.
ವೇದಿಕೆಯ ಉಪಾಧ್ಯಕ್ಷ ಪ್ರೊ.ಫಣಿರಾಜ್ ಮಾತನಾಡಿ, ನಮಗೆ ಸಂವಿಧಾನ ವನ್ನು ಪಾಲಿಸುವ ಸರಕಾರ ಬರಬೇಕು. ಕಾಂಗ್ರೆಸ್- ಜೆಡಿಎಸ್ ಸರಕಾರ ಬಂದರೂ ನಮ್ಮ ಚಳವಳಿ ಮುಂದುವರಿಯಲಿದೆ. ನಮ್ಮ ಹೋರಾಟ ಬಿಜೆಪಿ ವಿರುದ್ಧ ಅಲ್ಲ, ಸಂವಿಧಾನದ ವಿರುದ್ಧ ನಡೆದುಕೊಳ್ಳುವ ಎಲ್ಲರ ವಿರುದ್ಧ. ಆದುದರಿಂದ ಜೆಡಿಎಸ್ - ಕಾಂಗ್ರೆಸ್ ಮುಂದೆ ಸಂವಿಧಾನ ರಕ್ಷಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಜತೆ ಕಾರ್ಯದರ್ಶಿ ಹುಸೇನ್ ಕೊಡಿಬೇಂಗ್ರೆ ಉಪಸ್ಥಿತರಿದ್ದರು.
ಶಾಸಕರಿಂದ ಸಂವಿಧಾನ ರಕ್ಷಣೆಯ ಉಲ್ಲಂಘನೆ
ಬಂಟ್ವಾಳದ ನೂತನ ಬಿಜೆಪಿ ಶಾಸಕ ರಾಜೇಶ್ ನಾಯಕ್ ಮೃತ ಶರತ್ ಮಡಿವಾಳರ ಹೆತ್ತವರನ್ನು, ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ಮೃತ ಪ್ರಶಾಂತ್ ಪೂಜಾರಿಯ ಹೆತ್ತವರನ್ನು, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಮೃತ ದೀಪಕ್ ಮನೆಯವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿ ದ್ದರು. ಆದರೆ ಬಂಟ್ವಾಳದಲ್ಲಿ ಸಂಘಪರಿವಾರದ ಕಾರ್ಯಕರ್ತರಿಂದಲೇ ಕೊಲೆ ಯಾದ ಹರೀಶ್ ಪೂಜಾರಿ, ಸುರತ್ಕಲ್‌ನಲ್ಲಿ ಹತ್ಯೆಯಾದ ಬಶೀರ್, ಬ್ರಹ್ಮಾವರ ದ ಪ್ರವೀಣ್ ಪೂಜಾರಿಯ ಹೆತ್ತವರ ಮನೆಗೆ ಯಾರು ಕೂಡ ಸಾಂತ್ವನ ಹೇಳಲು ಯಾಕೆ ಹೋಗಿಲ್ಲ. ಇದು ಕೂಡ ಶಾಸಕರು ಸಂವಿಧಾನ ರಕ್ಷಣೆಯನ್ನು ಉಲ್ಲಂಘಿಸಿದಂತೆ ಎಂದು ಜಿ.ರಾಜಶೇಖರ್ ಟೀಕಿಸಿದರು.