ಸುಳ್ಳು ಪ್ರಚಾರದ ಗೆಲುವು ಶಾಶ್ವತ ಅಲ್ಲ: ಪ್ರಮೋದ್ ಮಧ್ವರಾಜ್

Update: 2018-05-19 16:46 GMT

ಉಡುಪಿ, ಮೇ 19: ‘ನನ್ನ ವಿರುದ್ಧ ಮಾಡಿರುವ ಸುಳ್ಳು ಪ್ರಚಾರದ ಗೆಲುವು ಎಂದಿಗೂ ಶಾಶ್ವತ ಅಲ್ಲ. ಸತ್ಯಕ್ಕೆ ಇಂದಲ್ಲ ನಾಳೆ ಜಯ ಸಿಕ್ಕೆ ಸಿಗುತ್ತದೆ’ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಶನಿವಾರ ನಡೆದ ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಕೃತಜ್ಞತಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಕೇವಲ ಅಭಿವೃದ್ಧಿಗೆ ಮಾತ್ರ ಗೆಲುವು ಆಗುತ್ತಿದ್ದರೆ ನಾವೆಲ್ಲ ಗೆಲ್ಲುತ್ತಿದ್ದೆವು. ಆದರೆ ಇಲ್ಲಿ ಅಪಪ್ರಚಾರ ಹಾಗೂ ಸುಳ್ಳು ಪ್ರಚಾರಗಳು ನಡೆದಿವೆ. ಸುಳ್ಳಿನಿಂದ ಗೆದ್ದವರಿಗೆ ಯಾವ ಗತಿ ಬರುತ್ತದೆ ಎಂಬುದಕ್ಕೆ ಯಡಿಯೂರಪ್ಪ ಅವರೇ ನಮ್ಮ ಕಣ್ಣ ಮುಂದೆ ಇರುವ ಸಾಕ್ಷಿ ಎಂದರು.

ನಾವು ನಮ್ಮ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿದ್ದೇವೆ. ಭ್ರಷ್ಟಾಚಾರದಲ್ಲಿ ಸಿಲುಕಿ, ಅತ್ಯಾಚಾರದಲ್ಲಿ ಹೆಸರು ಕೆಡಿಸಿ, ಜನರ ನಿರ್ಲಕ್ಷ ಮಾಡಿ, ಜನರ ಸೇವೆ ಮಾಡದೆ ಅನ್ಯಾಯ ಮಾಡಿರುವ ಸೋಲು ನಮ್ಮದಲ್ಲ. ನಾವು ಸೋತು ಗೆದ್ದಿದ್ದೇವೆ. ಐದು ವರ್ಷಗಳಲ್ಲಿ ಗರಿಷ್ಠ ಮಟ್ಟದ ಅಭಿವೃದ್ಧಿ ಯನ್ನು ಕ್ಷೇತ್ರದಲ್ಲಿ ಮಾಡಿದ್ದೇನೆ. ಇದಕ್ಕಿಂತ ಹೆಚ್ಚು ಅಭಿವೃದ್ಧಿಯನ್ನು ಯಾವುದೇ ಶಾಸಕರು ಮಾಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಯಾವುದೇ ಸಂಶಯ ಇಲ್ಲದಷ್ಟು ಕಾರ್ಯಕರ್ತರು ಈ ಚುನಾವಣೆಯಲ್ಲಿ ದುಡಿದಿದ್ದಾರೆ. ಕಾರ್ಯಕರ್ತರು ಮತ್ತು ನಾನು ಯಾವುದೇ ತಪ್ಪು ಮಾಡಿಲ್ಲ. ಆದರೆ ಜನರ ತೀರ್ಮಾನವನ್ನು ನಾವು ಅತ್ಯಂತ ಗೌರವದಿಂದ ಸ್ವೀಕರಿಸುತ್ತೇವೆ ಎಂದು ಅವರು ಹೇಳಿದರು.

ನಾವು ಅಧಿಕಾರದಲ್ಲಿರುವಾಗ ಬಿಜೆಪಿಯ ಯಾವುದೇ ಕಾರ್ಯಕರ್ತರಿಗೆ ತೊಂದರೆ ಮಾಡಿಲ್ಲ. ನಮ್ಮ ಒಳ್ಳೆಯತನವನ್ನು ದೌರ್ಬಲ್ಯ ಎಂದು ತಿಳಿಯ ಬಾರದು. ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆದರೆ ನಾವು 100ಕ್ಕೆ 100 ವಿರೋಧ ಮಾಡುತ್ತೇವೆ. ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ ಎಂದರು.
ಕಾರ್ಯಕರ್ತರಿಗೆ ಯಾವುದೇ ಸಮಸ್ಯೆ ಎದುರಾದರೆ ಒಂದು ಗಂಟೆಯೊಳಗೆ ಸ್ಥಳಕ್ಕೆ ಬಂದು ಸ್ಪಂದಿಸುತ್ತೇನೆ. ಜನರ ವಿಶ್ವಾಸವನ್ನು ನಾವು ಮತ್ತೆ ಗಳಿಸಬೇಕು. ಮುಂದೆ ನಡೆಯುವ ವಿಧಾನ ಪರಿಷತ್, ಸ್ಥಳೀಯಾಡಳಿತ ಹಾಗೂ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಈ ಚುನಾವಣೆಯ ಸೋಲಿಗೆ ಪ್ರತಿಕಾರ ತೀರಿಸಬೇಕು ಎಂದು ಅವರು ಕರೆ ನೀಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ ಮಾತನಾಡಿ, ಸಾಮಾಜಿಕ ಜಾಲ ತಾಣಗಳಲ್ಲಿ ನಮ್ಮ ವಿರುದ್ಧ ಅಪಪ್ರಚಾರವನ್ನು ಎದುರಿಸುವ ಶಕ್ತಿ ನಮಗೆ ಇಲ್ಲದ ಕಾರಣ ಸೋಲಾಯಿತು. ಈ ಬಗ್ಗೆ ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಬ್ಲಾಕ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ನೈರುತ್ಯ ಪದವೀ ಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ದಿನೇಶ್, ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ಜನಾರ್ದನ ಭಂಡಾರ್ಕರ್, ಕೀರ್ತಿ ಶೆಟ್ಟಿ, ಅಮೃತ್ ಶೆಣೈ, ಮೀನಾಕ್ಷಿ ಮಾಧವ ಬನ್ನಂಜೆ, ಯತೀಶ್ ಕರ್ಕೆರ ಮೊದಲಾದವರು ಉಪಸ್ಥಿತರಿದ್ದರು.

ಮರಳು ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ

ಚುನಾವಣೆಗೆ ಮೊದಲು ಜಿಲ್ಲೆಯ ಮರಳು ಸಮಸ್ಯೆಯನ್ನು ತಿಂಗಳೊಳಗೆ ಬಗೆಹರಿಸುವ ಆಶ್ವಾಸನೆ ನೀಡಿರುವ ಶಾಸಕ ರಘುಪತಿ ಭಟ್, ಜೂ.20ರೊಳಗೆ ಇದಕ್ಕೆ ಪರಿಹಾರ ದೊರಕಿಸಬೇಕು. ಕೊಟ್ಟ ಆಶ್ವಾಸನೆಯನ್ನು ಚಾಚು ತಪ್ಪದೆ ಅನು ಷ್ಠಾನ ಮಾಡಬೇಕು. ಇಲ್ಲದಿದ್ದರೆ ಅವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಮೋದ್ ಮಧ್ವರಾಜ್ ಎಚ್ಚರಿಕೆ ನೀಡಿದರು.
ನಿವೇಶನ ರಹಿತರಿಗೆ ಹಕ್ಕುಪತ್ರ ನೀಡುವ ಮತ್ತು ವಾರಾಹಿಯಿಂದ ಉಡುಪಿ ನಗರಕ್ಕೆ ನೀರು ತರುವ ಜವಾಬ್ದಾರಿ ರಘುಪತಿ ಭಟ್ ಅವರ ಮೇಲಿದೆ. ಅವರು ಮಾಡುವ ಅಭಿವೃದ್ಧಿ ಕಾರ್ಯಕ್ಕೆ ನಮ್ಮ ಬೆಂಬಲ ಇದೆ. ಅವರು ಅದಕ್ಕೆ ತಪ್ಪಿ ಬಿದ್ದರೆ ನಾವು ಸುಮ್ಮನೆ ಬಿಡಲ್ಲ. ಅನ್ಯಾಯ ವಿರುದ್ಧ ನಡೆದರೆ ಅದಕ್ಕೆ ಅವಕಾಶ ಕೊಡಲ್ಲ ಎಂದರು.

ಸಿದ್ದರಾಮಯ್ಯಗೆ ಕೃತಜ್ಞತೆಗಳು

ಸಿದ್ದರಾಮಯ್ಯ ಪ್ರಥಮ ಬಾರಿಗೆ ಗೆದ್ದು ಬಂದ ನನಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವನ್ನು ನೀಡಿದರು. ನಾವು ಯಾವುದೇ ಅಭಿವೃದ್ಧಿ ಕಾರ್ಯಕ್ರಮಕ್ಕೆ ಹಣ ಕೇಳಿದರೂ ಸಿದ್ಧರಾಮಯ್ಯ ಪ್ರಶ್ನೆ ಮಾಡದೆ ನೀಡಿದ್ದರು. ಮೂರು ದಿನಗಳ ಹಿಂದೆ ಬೆಂಗಳೂರಿಗೆ ತೆರಳಿ ಸಿದ್ಧರಾಮಯ್ಯ ಅವರ ಕಾಲು ಮುಟ್ಟಿ ನಮಸ್ಕರಿಸಿ ಕೃತಜ್ಞತೆ ಸಲ್ಲಿಸಿ ಬಂದಿದ್ದೇನೆ.
-ಪ್ರಮೋದ್ ಮಧ್ವರಾಜ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News