ಗಾಝಾಕ್ಕೆ ಯುದ್ಧಾಪರಾಧ ತನಿಖಾಗಾರರ ತಂಡ: ಯುಎನ್‌ಎಚ್‌ಆರ್‌ಸಿ ನಿರ್ಣಯ

Update: 2018-05-19 17:08 GMT

ಲಂಡನ್, ಮೇ 19: 100ಕ್ಕೂ ಅಧಿಕ ಫೆಲೆಸ್ತೀನೀಯರ ಸಾವಿಗೆ ಕಾರಣವಾದ ಹಿಂಸಾತ್ಮಕ ಪ್ರತಿಭಟನೆಗಳ ಬಗ್ಗೆ ತನಿಖೆ ನಡೆಸುವುದಕ್ಕಾಗಿ ಗಾಝಾಕ್ಕೆ ಅಂತಾರಾಷ್ಟ್ರೀಯ ಯುದ್ಧಾಪರಾಧಗಳ ತನಿಖಾಗಾರರ ತಂಡವೊಂದನ್ನು ಕಳುಹಿಸುವ ನಿರ್ಣಯವೊಂದನ್ನು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿ (ಯುಎನ್‌ಎಚ್‌ಆರ್‌ಸಿ) ಶುಕ್ರವಾರ ತೆಗೆದುಕೊಂಡಿದೆ.

ಅಂತಾರಾಷ್ಟ್ರೀಯ ತನಿಖಾ ಆಯೋಗವು ಯುಎನ್‌ಎಚ್‌ಆರ್‌ಸಿಯ ಅತ್ಯುನ್ನತ ಮಟ್ಟದ ತನಿಖೆಯಾಗಿದೆ. ಆದರೆ, ಈ ನಿರ್ಣಯದ ಬಗ್ಗೆ ಬ್ರಿಟನ್‌ಗೆ ಫೆಲೆಸ್ತೀನ್ ರಾಯಭಾರಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ.   ‘‘ಅಂತಾರಾಷ್ಟ್ರೀಯ ಸಂಸ್ಥೆಗಳು ಈ ಎಲ್ಲ ನಿರ್ಣಯಗಳನ್ನು ತೆಗೆದುಕೊಳ್ಳುತ್ತವೆ. ಆದರೆ, ವಾಸ್ತವವಾಗಿ ಸ್ಥಳದಲ್ಲಿ ಏನೂ ಬದಲಾವಣೆಯಾಗಿರುವುದಿಲ್ಲ. ಯಾವುದೂ ಜಾರಿಯಾಗುವುದಿಲ್ಲ’’ ಎಂದು ಅವರು ಹೇಳಿದರು.

ಭದ್ರತಾ ಮಂಡಳಿಯ 47 ಸದಸ್ಯರ ಪೈಕಿ ಅಮೆರಿಕ ಮತ್ತು ಆಸ್ಟ್ರೇಲಿಯ ಮಾತ್ರ ನಿರ್ಣಯದ ವಿರುದ್ಧವಾಗಿ ಮತ ಚಲಾಯಿಸಿದವು. 29 ದೇಶಗಳು ಪರವಾಗಿ ಮತ ಚಲಾಯಿಸಿದರೆ, ಬ್ರಿಟನ್, ಸ್ವಿಟ್ಸರ್‌ಲ್ಯಾಂಡ್ ಮತ್ತು ಜರ್ಮನಿ ಸೇರಿದಂತೆ 14 ದೇಶಗಳು ಗೈರುಹಾಜರಾದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News