ಕೆಲಿಂಜ: ಕಾಂಗ್ರೆಸ್ - ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ; ನಾಲ್ವರಿಗೆ ಗಾಯ

Update: 2018-05-19 18:02 GMT

ಬಂಟ್ವಾಳ, ಮೇ 19: ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು ಇತ್ತಂಡಗಳ ನಾಲ್ವರು ಗಾಯಗೊಂಡ ಘಟನೆ ವಿಟ್ಲ ಠಾಣೆ ವ್ಯಾಪ್ತಿಯ ಕೆಲಿಂಜದಲ್ಲಿ ಶನಿವಾರ ರಾತ್ರಿ ನಡೆದಿದೆ.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಅಝೀಝ್ ಹಾಗೂ ಸಾಲೀಮ್ ಗಾಯಗೊಂಡಿದ್ದು, ವಿಟ್ಲ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡ ಬಿಜೆಪಿ ಕಾರ್ಯಕರ್ತರಿಬ್ಬರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಶನಿವಾರ ರಾತ್ರಿ ವೇಳೆ ವಿಟ್ಲದ ಸುತ್ತಮುತ್ತಲಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವದಲ್ಲಿ ತೊಡಗಿದ್ದರು ಎನ್ನಲಾಗಿದೆ. ವಿಜಯೋತ್ಸವದ ಸಂದರ್ಭ ಕಾಂಗ್ರೆಸ್  ಕಾರ್ಯಕರ್ತರು ಬಿಜೆಪಿ ಮುರ್ದಾಬಾದ್ ಎಂದು ಘೋಷಣೆ ಕೂಗಿದ್ದು, ಇದಕ್ಕೆ ಪ್ರತಿಯಾಗಿ ಇಲ್ಲಿನ ಸ್ಥಳೀಯ ಬಿಜೆಪಿ ಕಾರ್ಯಕರ್ತರೂ ಕಾಂಗ್ರೆಸ್ ಮುರ್ದಾಬಾದ್ ಎಂದು ಘೋಷಣೆ ಕೂಗಿದ್ದಾರೆ ಎಂದು ಹೇಳಲಾಗಿದ್ದು, ತದನಂತರ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಬಳಿಕ ದೊಣ್ಣೆ, ಸೋಡಾ ಬಾಟ್ಲಿಗಳಿಂದ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ. 

ಕೆಲಿಂಜದಲ್ಲಿ ನಡೆದ ಘರ್ಷಣೆಯ ಮಾಹಿತಿ ಸಾಮಾಜಿಕ ಜಾಲತಾಣಗಳ ಮೂಲಕ ವಿಟ್ಲ ಸುತ್ತಮುತ್ತಲಲ್ಲಿ ವ್ಯಾಪಕವಾಗಿ ಹರಿಯತೊಡಗಿದ ಪರಿಣಾಮ ಕೊಳ್ನಾಡು ಗ್ರಾಮದ ಕುಡ್ತಮುಗೇರುವಿನಲ್ಲಿಯೂ ಗುಂಪು ಘರ್ಷಣೆ ನಡೆದಿದೆ ಎಂದು ಮಾಹಿತಿ ದೊರಕಿದೆ.

ಧನರಾಜ್ ಎಂಬವರು ಸೇರಿ ನಾಲ್ವರು ಗಾಯಗೊಂಡಿದ್ದು, ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಮುಂಜಾಗೃತ ಕ್ರಮವಾಗಿ ಕುಡ್ತಮುಗೇರು, ಕೊಳ್ನಾಡು ಪ್ರದೇಶದ ಅಂಗಡಿಮುಗ್ಗಟ್ಟುಗಳನ್ನು ಮುಚ್ಚಿಸಲಾಗಿದೆ. 

ಎಡಿಷನಲ್ ಎಸ್ಪಿ ಸಜಿತ್ ವಿ.ಜೆ., ಎಡಿಷನಲ್ ಡಿವೈಎಸ್ಪಿ ಡಿ.ಕುಮಾರ್, ವೃತ್ತ ನಿರೀಕ್ಷಕ ಪ್ರಕಾಶ್, ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News