ಕುಲಶೇಖರ: ನಿರ್ವಸಿತ ಕೊರಗ ಕುಟುಂಬಗಳಿಗೆ ಮನೆ ಹಸ್ತಾಂತರ

Update: 2018-05-20 12:11 GMT

ಮಂಗಳೂರು, ಮೇ 20: ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಹಾಗೂ ಹೊಸದಿಲ್ಲಿಯ ಆದಿವಾಸಿ ಅಧಿಕಾರ್ ಮಂಚ್ ಇದರ ಜಂಟಿ ಆಶ್ರಯದಲ್ಲಿ ನಗರ ಹೊರವಲಯದ ಕುಲಶೇಖರ ಸಮೀಪದ ಕೋಟಿಮುರ ವಾಟರ್ ಟ್ಯಾಂಕ್ ಬಳಿ ರವಿವಾರ ನಿರ್ವಸಿತ ಕೊರಗ ಕುಟುಂಬಗಳಿಗೆ ಮನೆ ಹಸ್ತಾಂತರ ಕಾರ್ಯಕ್ರಮ ಜರುಗಿತು.

ಈ ಸಂದರ್ಭ ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿ ಕೊರಗ ಸಮುದಾಯವು ಸಮಾಜದಲ್ಲೇ ಅತ್ಯಂತ ತಳ ಸಮುದಾಯ ವಾಗಿದೆ. ಮನೆ ಕಳಕೊಂಡಾಗ ಅಧೀರರಾಗಿದ್ದ ಈ ಕುಟುಂಬಕ್ಕೆ ಸಿಪಿಎಂ-ಡಿವೈಎಫ್‌ಐ ಧೈರ್ಯ ತುಂಬಿತ್ತು. ಅಲ್ಲದೆ ಜನಪರ ಹೋರಾಟ ನಡೆಸಿತ್ತು. ಅದರ ಫಲವಾಗಿ ಇದೀಗ 8 ಕುಟುಂಬಗಳಿಗೆ ಸೂರು ಲಭಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕೃಷಿಕರು, ಅಲ್ಪಸಂಖ್ಯಾತ ಸಮುದಾಯದ ಮುಸಲ್ಮಾನರು, ಕ್ರೈಸ್ತರ ಸಹಿತ ಅನೇಕ ಸಮುದಾಯದ ಪರವಾಗಿ ಡಿವೈಎಫ್‌ಐ-ಸಿಪಿಎಂ ಹಗಲಿರುಳು ಹೋರಾಟ ನಡೆಸಿತ್ತು. ಆದರೆ ಆ ಸಮುದಾಯವಿಂದು ನಮ್ಮನ್ನು ಕೈಬಿಟ್ಟಿರುವುದು ಬೇಸರ ತಂದಿದೆ ಎಂದು ವಸಂತ ಆಚಾರಿ ನುಡಿದರು.

ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ ಮಾತನಾಡಿ, ಊಟ, ಬಟ್ಟೆ ಇಲ್ಲದಿದ್ದರೂ ಮನುಷ್ಯ ಕಷ್ಟಪಟ್ಟು ದುಡಿದು ಸಂಪಾದಿಸಬಹುದು. ಆದರೆ ಸ್ವಂತ ಮನೆ ನಿರ್ಮಾಣ ಮಾಡುವುದು ಸುಲಭದ ಮಾತಲ್ಲ. ಇಂತಹ ಸಂದರ್ಭ ನಿರ್ವಸಿತ ಕೊರಗ ಕುಟುಂಬಗಳಿಗೆ ಮನೆ ನಿರ್ಮಿಸಿರುವುದು ಶ್ಲಾಘನೀಯ ಎಂದರು. ಮನೆ ನಿರ್ಮಾಣ ಸಮಿತಿಯ ಅಧ್ಯಕ್ಷ ಹಾಗೂ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಡಾ. ಕೃಷ್ಣಪ್ಪ ಕೊಂಚಾಡಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ದಲಿತ ಚಿಂತಕ ಸೀತಾರಾಮ ಎಸ್., ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಹಸಂಚಾಲಕ ಎಸ್.ವೈ. ಗುರುಶಾಂತ್, ಸಂಚಾಲಕ ವೈ.ಕೆ. ಗಣೇಶ್, ಅಖಿಲ ಭಾರತ ವಿಚಾರವಾದಿ ಸಂಘ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್, ವಾಸುದೇವ ಉಚ್ಚಿಲ್, ತಿಮ್ಮಯ್ಯ ಕೆ., ಸುನೀಲ್ ಕುಮಾರ್ ಬಜಾಲ್ ಮತ್ತಿತರರು ಪಾಲ್ಗೊಂಡಿದ್ದರು.

ಸುಮಾರು 10 ವರ್ಷಗಳ ಹಿಂದೆ ಅಂದರೆ 2009ರಲ್ಲಿ ಹೆದ್ದಾರಿ ನಿರ್ಮಾಣಕ್ಕಾಗಿ ನಂತೂರಿನ ಹೈಪಾಯಿಂಟ್‌ನಲ್ಲಿ 8 ಆದಿವಾಸಿ ಕೊರಗ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿತ್ತು. ಭೂಮಿ ಮತ್ತು ಮನೆಗಳನ್ನು ಕಳಕೊಂಡ 8 ಕುಟುಂಬಗಳು ಅತಂತ್ರ ಸ್ಥಿತಿಗೆ ತಲುಪಿತ್ತು. ಸರಕಾರದ ನಿರ್ಲಕ್ಷದ ವಿರುದ್ಧ ಮತ್ತು ನ್ಯಾಯ ದೊರಕಿಸಿಕೊಡುವ ಸಲುವಾಗಿ ಸಿಪಿಎಂ-ಡಿವೈಎಫ್‌ಐ ಹೋರಾಟ ನಡೆಸಿತ್ತು. ಅಂತೂ ಆಕರ್ಷಕ ಮತ್ತು ಆಧುನಿಕ ಆವಶ್ಯಕತೆಯೊಂದಿಗೆ ಸರಕಾರದ ವಿವಿಧ ಇಲಾಖೆಗಳ ಸಹಾಯಧನ ಹಾಗೂ ದಾನಿಗಳ ನೆರವಿನಿಂದ ಆದಿವಾಸಿ ಮನೆ ನಿರ್ಮಾಣ ಸಮಿತಿಯ ನೇತೃತ್ವದಲ್ಲಿ ಈ ಮನೆಗಳನ್ನು ಕಟ್ಟಿಸಿಕೊಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News