×
Ad

ಜಿಲ್ಲಾ ಕುಡುಬಿ ಸಮುದಾಯದ ವಿದ್ಯಾರ್ಥಿ ಸಮಾವೇಶ

Update: 2018-05-20 20:08 IST

ಕುಂದಾಪುರ, ಮೇ 20: ಕುಡುಬಿ ಸಮುದಾಯ ಸಮಾಜದ ಮುಖ್ಯ ವಾಹಿನಿಗೆ ಬರಬೇಕಾದರೆ ಶಿಕ್ಷಣ ಪಡೆಯುವುದು ಅತಿ ಅಗತ್ಯ ಎಂದು ಬ್ರಹ್ಮಾವರ ಎಸ್‌ಎಂಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ವೈ. ರವೀಂದ್ರ ನಾಥ ರಾವ್ ಹೇಳಿದ್ದಾರೆ.

ಕುಡುಬಿ ಸಮಾಜೋದ್ಧಾರಕ ಸಂಘದ ವತಿಯಿಂದ ಹಿಲಿಯಾಣ ಆಮ್ರಕಲ್ಲು ಶ್ರೀಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ರವಿವಾರ ಆಯೋಜಿಸಲಾದ ಉಡುಪಿ ಜಿಲ್ಲೆಯ ಕುಡುಬಿ ಜನಾಂಗದ ವಿದ್ಯಾರ್ಥಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಮುದಾಯದ ಮಕ್ಕಳು ಐಎಎಸ್, ಕೆಎಎಸ್‌ನಂತಹ ನಾಗರಿಕ ಪರೀಕ್ಷೆಗಳಲ್ಲಿ ಬರೆಯುವ ಗಮನಹರಿಸಬೇಕು. ಈ ಬಗ್ಗೆ ಹೆಚ್ಚಿನ ಶ್ರಮ ವಹಿಸಬೇಕು. ಆ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಸರಕಾರಿ ಉದ್ಯೋಗ ಪಡೆಯಲು ಪ್ರಯತ್ನಿಸ ಬೇಕು ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ಕುಡುಬಿ ಸಮಾಜೋದ್ಧಾರಕ ಸಂಘದ ಜಿಲ್ಲಾಧ್ಯಕ್ಷ ಅಣ್ಣಪ್ಪ ನಾಯ್ಕಾ ಅಲ್ಬಾಡಿ ವಹಿಸಿದ್ದರು. ರಾಜ್ಯ ಕುಡುಬಿ ಸಮಾಜೋದ್ಧಾರಕ ಸಂಘದ ಕಾರ್ಯದರ್ಶಿ ನಾರಾಯಣ ನಾಯ್ಕಾ ಗೋಳಿಯಂಗಡಿ, ಯುವ ಸಂಘದ ಅಧ್ಯಕ್ಷ ಗಣೇಶ್ ನಾಯ್ಕಾ ಯಡ್ತಾಡಿ, ಸಂಘದ ಉಪಾಧ್ಯಕ್ಷೆ ಪಾರ್ವತಿ ಗೋಳಿ ಯಂಗಡಿ, ರಮೇಶ್ ಮಂದಾರ್ತಿ, ಶಿಕ್ಷಣ ಸಮಿತಿಯ ಸಂಚಾಲಕ ನರಸಿಂಹ ನಾಯ್ಕಾ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ 2018ನೇ ಸಾಲಿನ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಉನ್ನತ ಅಂಕಗಳನ್ನು ಪಡೆದ ಜಿಲ್ಲೆಯ ಮೂವರು ಕುಡುಬಿ ಸಮಾಜದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಂಘದ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ್ ನಾಯ್ಕಾ ಆರ್ಡಿ ಸ್ವಾಗತಿಸಿದರು. ಅರ್ಜುನ್ ವಳಬೈಲು ವಂದಿಸಿದರು. ವಿಘ್ನೇಶ್ ರೆಂಜಾಲು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News