ವಾರಾಹಿ ಕುಡಿಯುವ ನೀರು ಯೋಜನೆಗೆ ಹೊಸ ಡಿಪಿಆರ್ : ನೂತನ ಶಾಸಕ ರಘುಪತಿ ಭಟ್

Update: 2018-05-21 15:54 GMT

ಉಡುಪಿ, ಮೇ 21: ಉಡುಪಿ ನಗರಕ್ಕೆ ಕುಡಿಯುವ ನೀರಿಗಾಗಿ ವಾರಾಹಿ ನದಿ ನೀರನ್ನು ತರುವ ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಅವರ ಪ್ರಸ್ತಾಪ ಕಾರ್ಯಸಾಧುವಲ್ಲ ಎಂದು ಹೇಳಿದ ಉಡುಪಿಯ ನೂತನ ಶಾಸಕ ಕೆ.ರಘುಪತಿ ಭಟ್, ಇದಕ್ಕಾಗಿ ತಜ್ಞರೊಂದಿಗೆ ಸಮಾಲೋಚಿಸಿ ಹೊಸ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ತಯಾರಿಸಿ ಅನುಷ್ಠಾನಗೊಳಿಸುವುದಾಗಿ ತಿಳಿಸಿದರು.

ಶಾಸಕರಾಗಿ ಆಯ್ಕೆಯಾದ ಬಳಿಕ ಕಡಿಯಾಳಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಕಳೆದ ಸರಕಾರದ ಅವಧಿಯಲ್ಲಿ ತಯಾರಿಸಲಾದ ಡಿಪಿಆರ್ ಹಾಗೂ ಈಗಿರುವ ಟೆಂಡರ್‌ನಂತೆ ಉಡುಪಿಗೆ ನೀರು ತರುವ ವಾರಾಹಿ ಯೋಜನೆ ಖಂಡಿತ ಸಾಧ್ಯವಿಲ್ಲ ಎಂದವರು ಅಭಿಪ್ರಾಯ ಪಟ್ಟರು.

ಉಡುಪಿಯಿಂದ ಬಜೆಗೆ ನೇರವಾದ ರಸ್ತೆ ಸಂಪರ್ಕವಿಲ್ಲ. ಸುತ್ತು ಬಳಸಿ ತರುವ ರಸ್ತೆಯ ಅಡಿಯಿಂದ ಪೈಪ್ ಮೂಲಕ ನೀರು ತರುವ ಯೋಜನೆ ಖಂಡಿತ ಕಾರ್ಯಸಾದುವಲ್ಲ. ಇದಕ್ಕೆ ಅನೇಕ ಗ್ರಾಪಂಗಳು ಒಪ್ಪಿಗೆ ಸೂಚಿಸುವ ಸಾದ್ಯತೆ ಇಲ್ಲ. ಅಲ್ಲದೇ ಗ್ರಾಮೀಣ ಭಾಗದ ರಸ್ತೆಗಳು ಅಗಲ ಕಿರಿದಾಗಿವೆ. ಅಲ್ಲಿ ಭೂಸ್ವಾಧೀನವೂ ಕಷ್ಟಸಾಧ್ಯ ಎಂದರು.

ಈ ಬಗ್ಗೆ ತಾನು ಸುರತ್ಕಲ್ ಎನ್‌ಐಟಿಕೆಯ ನಿವೃತ್ತ ಪ್ರಾದ್ಯಾಪಕ ಡಾ.ಮಯ್ಯ ರೊಂದಿಗೆ ಚರ್ಚಿಸಿದ್ದು, ಶೀಘ್ರವೇ ಈ ಬಗ್ಗೆ ಯೋಜನಾ ವರದಿ ತಯಾರಿಸಲಾ ಗುವುದು. ಇದಕ್ಕಾಗಿ ಶೀಂಬ್ರದಲ್ಲಿ ಅಣೆಕಟ್ಟು ಕಟ್ಟುವ ಸಾಧ್ಯತೆಯನ್ನು ಪರಿಶೀಲಿಸಲಾಗುವುದು. ಒಟ್ಟಿನಲ್ಲಿ ಉಡುಪಿಯ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ವಾರಾಹಿಯಿಂದ ನೀರು ತರಲಾಗುವುದು. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ತಾವು ಪ್ರಥಮ ಆದ್ಯತೆ ನೀಡುವುದಾಗಿ ತಿಳಿಸಿದರು.

ಮರಳು ಸಮಸ್ಯೆ:ಇದೀಗ ವಿಧಾನಪರಿಷತ್‌ನ ಶಿಕ್ಷಕರ ಹಾಗೂ ಪದವೀಧರ ಶಿಕ್ಷಕರ ಕ್ಷೇತ್ರದ ಚುನಾವಣೆ ಘೋಷಣೆಯಾಗಿರುವುದರಿಂದ ಚುನಾವಣಾ ನೀತಿ ಸಂಹಿತೆ ಮತ್ತೆ ಜಾರಿಯಾಗಿದೆ. ಹೀಗಾಗಿ ಜೂ.15ರವರೆಗೆ ಅಧಿಕಾರಿಗಳೊಂದಿಗೆ ಹಲವು ಸಮಸ್ಯೆಗಳ ನಿವಾರಣೆ ಕುರಿತು ಚರ್ಚಿಸಲು ಸಭೆ ನಡೆಸುವಂತಿಲ್ಲ. ಇದರಿಂದ ಜಿಲ್ಲೆಯಲ್ಲಿರುವ ಮರಳು ಸಮಸ್ಯೆ ನಿವಾರಣೆಗೆ ಸದ್ಯಕ್ಕೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಾಣಲು ಸಾದ್ಯವಾಗುತ್ತಿಲ್ಲ ಎಂದವರು ಹೇಳಿದರು.

ಜೂನ್ ತಿಂಗಳಲ್ಲಿ ಮಳೆಗಾಲ ಪ್ರಾರಂಭಗೊಳ್ಳುವುದರಿಂದ ಮರಳುಗಾರಿಕೆ ಸ್ಥಗಿತಗೊಳ್ಳಲಿದೆ. ಆಗಸ್ಟ್‌ನಲ್ಲಿ ಮರಳುಗಾರಿಕೆ ಪುನರಾರಂಭಗೊಂಡಾಗ ಮರಳು ಗಾರಿಕಾ ನಿಯಮಗಳನ್ನು ಸರಳೀಕರಣಗೊಳಿಸಿ, ಮರಳಿನ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು. ಕರಾವಳಿಗೆ ಪ್ರತ್ಯೇಕ ಮರಳುಗಾರಿಕಾ ನೀತಿಯನ್ನು ಘೋಷಿಸಲು ಸರಕಾರದ ಮೇಲೆ ಒತ್ತಡ ಹೇರಲಾಗುವುದು. ನಾನ್ ಸಿಆರ್‌ಝಡ್ ವ್ಯಾಪ್ತಿಯ ಮರಳುಗಾರಿಕೆ ಇರುವ ತಡೆಯನ್ನು ನಿವಾರಿಸಿ ಮರಳಿನ ಸಮಸ್ಯೆಯನ್ನು ಬಗೆಹರಿಸಲಾಗುವುದು. ಈಗ ಸಮಸ್ಯೆಗೆ ಕಾರಣವಾಗಿರುವ ಜಿಪಿಎಸ್ ನಿಯಮದಲ್ಲೂ ಕೆಲ ಬದಲಾವಣೆ ಮಾಡಲಾಗುವುದು ಎಂದರು.

ಮಹಿಳಾ-ಮಕ್ಕಳ ಆಸ್ಪತ್ರೆ: ಈಗ ಖಾಸಗಿಯವರ (ಡಾ.ಬಿ.ಆರ್.ಶೆಟ್ಟಿ) ವಶಕ್ಕೆ ಹೋಗಿರುವ ಉಡುಪಿಯ ಹಾಜಿ ಅಬ್ದುಲ್ಲಾ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಮತ್ತೆ ಸರಕಾರದ ಸುಪರ್ದಿಗೆ ತರಲು ಸರಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸುವುದಾಗಿ ಭಟ್ ತಿಳಿಸಿದರು.
ಹಾಜಿ ಅಬ್ದುಲ್ಲಾ ಅವರು ಸರಕಾರಕ್ಕೆ ನೀಡಿದ ಜಾಗದಲ್ಲಿ ಡಾ.ಶೆಟ್ಟಿ ಅವರು 400 ಹಾಸಿಗೆಗಳ ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡಲಿದ್ದು, ಇದಕ್ಕೆ ಪ್ರತಿಯಾಗಿ 200 ಹಾಸಿಗೆಗಳ ಅತ್ಯಾಧುನಿಕ ಆಸ್ಪತ್ರೆಯನ್ನು ನಿರ್ಮಿಸಿದ್ದಾರೆ. ಇದನ್ನು ಸರಕಾರಕ್ಕೆ ಸಂಪೂರ್ಣವಾಗಿ ಬಿಟ್ಟುಕೊಟ್ಟು, ಹಿಂದಿನಂತೆ ಜಿಲ್ಲಾ ಸರ್ಜನ್ ನೇತೃತ್ವದಲ್ಲಿ ಸರಕಾರಿ ವೈದ್ಯರೇ ಎಲ್ಲವನ್ನೂ ನೋಡಿಕೊಳ್ಳಬೇಕು. ಬಡ ಜನತೆಗೆ ಹಿಂದಿನಂತೆ ಉಚಿತವಾಗಿ ಎಲ್ಲಾ ಚಿಕಿತ್ಸೆಯೂ ಸಿಗಬೇಕು.

ಆಸ್ಪತ್ರೆಗೆ ಬೇಕಾದ ವಿಶೇಷಜ್ಞರು ಹಾಗೂ ತಾಂತ್ರಿಕ ತಜ್ಞರ ಸೇವೆಯನ್ನು ಖಾಸಗಿಯವರು ಒದಗಿಸಿಕೊಡಬೇಕು. ಅದೇ ರೀತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯಲ್ಲೂ ವಿಶೇಷ ಚಿಕಿತ್ಸೆಗೆ ಅವಕಾಶ ನೀಡಬೇಕು. ಸರಕಾರದಿಂದ ಉಚಿತವಾಗಿ ಪಡೆದ ಭೂಮಿಗೆ ಅವರು ಈ ಸೇವೆಯನ್ನು ನೀಡಲೇಬೇಕು. ಅಲ್ಲದೇ ಸರಕಾರಿ ಆಸ್ಪತ್ರೆಯ ನಿರ್ವಹಣೆಗೆ ಜಿಲ್ಲಾಧಿಕಾರಿ, ಜಿಲ್ಲಾ ಸರ್ಜನ್, ಜನಪ್ರತಿನಿಧಿಗಳಿರುವ ಸಮಿತಿಯನ್ನು ನೇಮಿಸಬೇಕು ಎಂಬುದು ಶಾಸಕರಾಗಿ ತಮ್ಮ ಬೇಡಿಕೆಯಾಗಿದೆ ಎಂದರು.

ಅಲ್ಲದೇ ಈ ಆಸ್ಪತ್ರೆಗೆ ಹಿಂದಿನಂತೆ ‘ಹಾಜಿ ಅಬ್ದುಲ್ಲಾ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ’ ಎಂದೇ ನಾಮಕರಣ ಮಾಡಬೇಕು. ಹಾಜಿ ಅಬ್ದಲ್ಲಾರಿಗೆ ಇದು ನಾವು ಸಲ್ಲಿಸುವ ಕೃತಜ್ಞತೆಯಾಗಲಿದೆ. ಬೇಕಿದ್ದರೆ 400 ಹಾಸಿಗೆಗಳ ಸೂಪರ್‌ಸ್ಪೆಷ್ಪಾಲಿಟಿ ಆಸ್ಪತ್ರೆಗೆ ಡಾ.ಶೆಟ್ಟಿ ಅವರು ತಮ್ಮ ಹೆತ್ತವರ ಹೆಸರು ಇಡಲಿ ಎಂದು ರಘುಪತಿ ಭಟ್ ನುಡಿದರು.

ಕಾರ್ಯಕರ್ತರಿಗೆ ಕೃತಜ್ಞತೆ: ರಾಜ್ಯದ ನಂ.1 ಶಾಸಕರೆಂದು ಹೆಗ್ಗಳಿಕೆ ಪಡೆದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ತಮಗೆ 12044 ಮತಗಳ ಅಂತರದ ಅಭೂತಪೂರ್ವ ಜಯ ತಂದಿತ್ತ ಮತದಾರರಿಗೆ ಹಾಗೂ ಇದಕ್ಕಾಗಿ ದುಡಿದ ಪಕ್ಷದ ಕಾರ್ಯಕರ್ತರಿಗೆ ತಾವು ಅಭಿನಂದನೆ ಸಲ್ಲಿಸುವುದಾಗಿ ರಘುಪತಿ ಭಟ್ ತಿಳಿಸಿದರು.

ರಾಜ್ಯದಲ್ಲಿ ಅತ್ಯಧಿಕ ಸ್ಥಾನ ಗೆದ್ದರೂ ಸರಕಾರ ರಚಿಸಲು ಸಾಧ್ಯವಾಗದಿರು ವುದರಿಂದ ಪಕ್ಷಕ್ಕೆ ತಾತ್ಕಾಲಿಕ ಹಿನ್ನಡೆಯಾಗಿದೆ. ಆದರೆ ಜನರ ವಿಶ್ವಾಸ ಪಕ್ಷದ ಮೇಲಿದೆ ಎಂಬುದು ಫಲಿತಾಂಶದಿಂದ ಸ್ಪಷ್ಟವಾಗಿದೆ. ಈ ಬಾರಿ ಗ್ರಾಮೀಣ ಭಾಗದಲ್ಲೂ ತಮಗೆ ಮುನ್ನಡೆ ದೊರಕಿದ್ದು, ನಗರಸಭಾ ವ್ಯಾಪ್ತಿಯ ಜನರು ಸಂಪೂರ್ಣವಾಗಿ ಬಿಜೆಪಿ ಪರ ಮತ ಚಲಾಯಿಸಿದ್ದಾರೆ ಎಂದರು.

ತಾವು ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ 2026 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿ ಮಾಡಿರುವುದಾಗಿ ಬುರುಡೆ ಬಿಟ್ಟ ಮಾಜಿ ಸಚಿವರಿಗೆ ಜನರು ತಕ್ಕ ಉತ್ತರ ನೀಡಿದ್ದಾರೆ. ಪ್ರಮೋದ್ ಮಧ್ವರಾಜ್‌ರಿಗೆ ಉಡುಪಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ತಾವು ಜನರಿಟ್ಟ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದಾಗಿ ರಘುಪತಿ ಭಟ್ ಭರವಸೆ ನೀಡಿದರು.

ಶಾಸಕ ಸ್ಥಾನ ಎಂಬುದು ಜನತೆ ನೀಡಿದ ಪದವಿಯಲ್ಲ. ಇದೊಂದು ಜವಾಬ್ದಾರಿ ಎಂಬುದರ ಅರಿವು ನನಗಿದೆ. ಜನಪ್ರತಿನಿಧಿಯಾಗಿ ನನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದವರು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕರಾದ ದಿನಕರಬಾಬು, ಪ್ರಭಾಕರ ಪೂಜಾರಿ, ಉಮೇಶ್ ಪೂಜಾರಿ, ದಾವೂದ್ ಅಬೂಬಕ್ಕರ್, ಉಪೇಂದ್ರ ನಾಯಕ್, ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News