ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿಯಾಗಿ ಡಾ. ನವೀನ್ ಭಟ್ ನಿಯುಕ್ತಿ

Update: 2018-05-22 12:01 GMT

ಬಂಟ್ವಾಳ, ಮೇ 22: ಕಳೆದ ವರ್ಷ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೆ ಸ್ಥಾನಗಳಿಸಿದ ಡಾ. ನವೀನ್ ಭಟ್ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿಯಾಗಿ ನಿಯುಕ್ತಿಗೊಂಡಿದ್ದು, ಮೇ 24ರಂದು ಪ್ರೊಬೆಷನರಿ ಆಧಾರದ ಮೇಲೆ ಕರ್ನಾಟಕ ಸರಕಾರದ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಬಂಟ್ವಾಳ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ, ನವೀನ್ ಅವರ ತಂದೆ ಉಮೇಶ್ ಭಟ್ ಅವರು ಮಾಹಿತಿ ನೀಡಿದ್ದಾರೆ.

ಮೇ 24ರಂದು ಪ್ರೊಬೆಷನರಿ ಆಧಾರದ ಮೇಲೆ ಕರ್ನಾಟಕ ಸರಕಾರದ ಕರ್ತವ್ಯಕ್ಕೆ ಹಾಜರಾಗುವ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಅವರು, 2017ರ ಬ್ಯಾಚ್‍ನ ಒಟ್ಟು 9 ಮಂದಿಯನ್ನು ಕರ್ನಾಟಕದ ಸೇವೆಗೆ ನಿಯುಕ್ತಿಗೊಳಿಸಲಾಗಿದ್ದು, ಇವೆಲ್ಲರೂ ಮೈಸೂರಿಯಲ್ಲಿ ತರಬೇತಿಯನ್ನು ಮುಗಿಸಿದ್ದಾರೆ. ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿರುವ ನಂದಿನಿ ಕೆ.ಆರ್, ಶೇಕ್ ತನ್ವೀರ್ ಆಸಿಫ್, ಡಾ. ನವೀನ್ ಭಟ್, ಅಕ್ಷಯ್ ಶ್ರೀಧರ್, ದಿಲೀಶ್ ಸಶಿ, ನಂದಿನಿದೇವಿ ಕೆ, ಪ್ರಿಯಾಂಗಾ ಎಂ, ಲೋಖಂಡೆ ಸ್ನೇಹಲ್ ಸುಧಾಕರ್ ಮತ್ತು ಭನ್ವಾರ್ ಸಿಂಗ್ ಮೀನಾ ಅವರು ಕರ್ನಾಟಕಕ್ಕೆ ಆಯ್ಕೆಯಾದ ಐಎಎಸ್ ನೂತನ ಅಧಿಕಾರಿಗಳು ಎಂದು ಮಾಹಿತಿ ನೀಡಿದರು.

ಮೇ 24ರಂದು ಕರ್ತವ್ಯಕ್ಕೆ ಇವರು ಹಾಜರಾಗಬೇಕಿದ್ದು, ಅಲ್ಲಿಂದ ಮೈಸೂರಿನಲ್ಲಿ ಜುಲೈವರೆಗೆ ತರಬೇತಿ ನೀಡಲಾಗುತ್ತದೆ. ಬಳಿಕ ನಿಯೋಜಿಸಲಾದ ಸ್ಥಳಗಳಿಗೆ ಅವರನ್ನು ಪ್ರೊಬೆಷನರಿ ಅಕಾರಿಗಳನ್ನಾಗಿ ಕಳುಹಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಬಂಟ್ವಾಳಕ್ಕೆ ಕೀರ್ತಿ ತಂದ ನವೀನ್: ಲೋಕೋಪಯೋಗಿ ಇಲಾಖೆಯ ಅಧಿಕಾರಿ, ಬಂಟ್ವಾಳ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಉಮೇಶ್ ಭಟ್ ಮತ್ತು ವಿಜಯಲಕ್ಷ್ಮಿ ದಂಪತಿಯ ಪುತ್ರ ಡಾ. ನವೀನ್ ಭಟ್, ರಾಷ್ಟ್ರದ ಅತ್ಯುನ್ನತ ಸೇವೆಗಳಲ್ಲೊಂದಾದ ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 37ನೆ ರ್ಯಾಂಕ್‍ಗಳಿಸಿ ರಾಜ್ಯಕ್ಕೇ ಮೂರನೇಯವರಾಗಿ ಹೊರಹೊಮ್ಮಿದ್ದರು.

ಪ್ರಾಥಮಿಕ ವಿದ್ಯಾಭ್ಯಾಸವನ್ನು ಮೂಡುಬಿದರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಬಂಟ್ವಾಳ ಬಿ.ಸಿ.ರೋಡಿನ ಮೊಡಂಕಾಪುವಿನಲ್ಲಿರುವ ಇನ್‍ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೈಸ್ಕೂಲ್ ಹಾಗೂ ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ವಿದ್ಯಾಭ್ಯಾಸ ಪಡೆದಿರುವ ನವೀನ್ ಎಂಬಿಬಿಎಸ್ ಪದವೀಧರರಾದರೆ, ಅವರ ಸಹೋದರಿ ನವ್ಯಾ ಎಂಬಿಬಿಎಸ್ ಕಲಿಯುತ್ತಿದ್ದಾರೆ.

2009ರಲ್ಲಿ ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ ನವೀನ್, ಬಳಿಕ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಪೂರೈಸಿದರು. ಬಳಿಕ ಐಎಎಸ್ ಪರೀಕ್ಷೆ ಬರೆಯುವ ಹಂಬಲದಿಂದ ಚೆನ್ನೈನ ಶಂಕರ್ ಕೋಚಿಂಗ್‍ಗೆ ಸೇರಿ ಅಲ್ಲಿ ಆರು ತಿಂಗಳ ತರಬೇತಿ, ಅದಾದ ಬಳಿಕ ಸ್ನೇಹಿತರೊಂದಿಗೆ ಬೆಂಗಳೂರಿನಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆಗಾಗಿ ತರಬೇತಿ ಪಡೆದಿದ್ದಾರೆ. ಮೂಲತ: ಉಡುಪಿ ಜಿಲ್ಲೆಯ ಎಲ್ಲೂರಿನವರಾದ ಉಮೇಶ್ ಭಟ್ ಕುಟುಂಬದ ಜೊತೆಗೆ ನವೀನ್ ಬಂಟ್ವಾಳಕ್ಕೂ ಕೀರ್ತಿ ತಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News