ಕರ್ವಾಲು ದೇವಳದಲ್ಲಿ ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ವಿಶೇಷ ಪೂಜೆ

Update: 2018-05-22 14:29 GMT

ಕಾರ್ಕಳ, ಮೇ 22: ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಹಾಗೂ ಮಾಜಿ ಕ್ರಿಕೆಟ್ ಆಟಗಾರ ರವಿಶಾಸ್ತ್ರಿ ಮಂಗಳವಾರ ಕಾರ್ಕಳ ತಾಲೂಕಿನ ಯರ್ಲಪ್ಪಾಡಿಯಲ್ಲಿರುವ ಕರ್ವಾಲು ವಿಷ್ಣುಮೂರ್ತಿ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಕಳೆದ 11 ವರ್ಷಗಳಿಂದ ಈ ದೇವಸ್ಥಾನಕ್ಕೆ ಆಗಮಿಸುತ್ತಿರುವ ರವಿಶಾಸ್ತ್ರಿ, ಪ್ರತಿವರ್ಷದಂತೆ ವಿಷ್ಣುಮೂರ್ತಿ ದೇವರಿಗೆ ಹೂವಿನ ಪೂಜೆ ಹಾಗೂ ನಾಗ ದೇವರಿಗೆ ಆಶ್ಲೇಷ ಬಲಿ ಸೇವೆ, ಪಂಚಾಮೃತ ಅಭಿಷೇಕ, ನಾಗದರ್ಶನ ಸೇವೆಯನ್ನು ಸಲ್ಲಿಸಿದರು.

ಮದುವೆಯಾದ ಬಳಿಕ ಹಲವು ವರ್ಷಗಳ ಕಾಲ ಮಕ್ಕಳಿಲ್ಲದ ರವಿಶಾಸ್ತ್ರಿ ದಂಪತಿಗೆ ಜ್ಯೋತಿಷಿಯೊಬ್ಬರು, ಕಾರ್ಕಳದ ಕರ್ವಾಲಿನಲ್ಲಿರುವ ಅವರ ಪೂರ್ವಜರು ನಂಬಿಕೊಂಡು ಬಂದ ನಾಗಬನಕ್ಕೆ ತೆರಳಿ ಪೂಜೆ ಸಲ್ಲಿಸುವಂತೆ ಸಲಹೆ ನೀಡಿದ್ದರು. ಅದರ ನಂತರ ಶಾಸ್ತ್ರಿಯವರು ಹೆಣ್ಣು ಮಗುವಿಗೆ ತಂದೆಯಾಗಿದ್ದರು. ಹಾಗಾಗಿ ರವಿಶಾಸ್ತ್ರಿ ಹಿಂದೆ ಸಂಕಲ್ಪಿಸಿದ ಇಷ್ಟಾರ್ಥ ಸಿದ್ದಿಸಿದ ಪ್ರಯುಕ್ತ ಪ್ರತಿ ವರ್ಷ ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಕರ್ವಾಲು ವಿಷ್ಣುಮೂರ್ತಿ ದೇವಳದಲ್ಲಿ ರವಿಶಾಸ್ತ್ರಿ ಅವರ ಪೂರ್ವಜರು ಆರಾಧಿಸಿಕೊಂಡು ಬಂದ ಮೂಲ ನಾಗದೇವರ ಬನವಿದೆ. 

ಕ್ರಿಕೆಟ್ ತಂಡದ ಆಟಗಾರರು ಹಾಗೂ ನನ್ನ ನಡುವೆ ಉತ್ತಮ ಬಾಂಧವ್ಯ ಇದೆ. ಆಟಗಾರರಿಗೆ ಅಗತ್ಯ ಮಾರ್ಗದರ್ಶನ ಹಾಗೂ ತರಬೇತಿ ನೀಡುವುದು ನನ್ನ ಕರ್ತವ್ಯ. ಐಪಿಎಲ್ ಕ್ರಿಕೆಟ್ ಟೂರ್ನಿಗೆ ಆಟಗಾರರನ್ನು ಆಯ್ಕೆ ಮಾಡುವುದು ಐಪಿಎಲ್ ಆಯ್ಕೆ ಸಮಿತಿಯ ಜವಾಬ್ದಾರಿ. ಇದರಲ್ಲಿ ನಾನು ಭಾಗಿಯಾಗಿಲ್ಲ ಎಂದು ರವಿಶಾಸ್ತ್ರಿ ತಿಳಿಸಿದರು.

ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತ, ಕಾರ್ಕಳದ ಕರ್ವಾಲಿನ ನಾಗಬನಕ್ಕೆ ಕಳೆದ 11 ವರ್ಷಗಳಿಂದ ಭೇಟಿ ನೀಡುತ್ತಿದ್ದೇನೆ. ಇಲ್ಲಿಯ ವಾತಾವರಣ ನನಗೆ ತುಂಬಾ ಇಷ್ಟವಾಗಿದೆ. ಇದು ನನ್ನ ಪೂರ್ವಜರು ಇದ್ದ ಸ್ಥಳವಾಗಿದ್ದು, ಈ ಸ್ಥಳದ ಬಗ್ಗೆ ಆಗಾಗ ನೆನಪು ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News