×
Ad

ಮೇ 27 ರಂದು ಪಟ್ಲ ಸಂಭ್ರಮ : ಡಾ.ಶಿಮಂತೂರು ನಾರಾಯಣ ಶೆಟ್ಟಿಯವರಿಗೆ ಪಟ್ಲ ಪ್ರಶಸ್ತಿ ಪ್ರದಾನ

Update: 2018-05-22 19:54 IST

ಮಂಗಳೂರು,ಮೇ 22: ಅಡ್ಯಾರ್ ಗಾರ್ಡನ್‌ನಲ್ಲಿ ಮೇ 27ರಂದು ಯಕ್ಷದ್ರುವ ಪಟ್ಲ ಸಂಭ್ರಮ -2018 ನಡೆಯಲಿದೆ. ಬೆಳಗ್ಗೆ 8ರಿಂದ ರಾತ್ರಿ 12ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಪಟ್ಲ ಸಂಭ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಯಕ್ಷರಂಗಕ್ಕೆ ಕೊಡುಗೆ ನೀಡಿದ ಡಾ.ಶಿಮಂತೂರು ನಾರಾಯಣ ಶೆಟ್ಟಿಯವರಿಗೆ ಪಟ್ಲ ಪ್ರಶಸ್ತಿ ನೀಡಲಾಗುವುದು ಎಂದು ಟ್ರಸ್ಟಿನ ಅಧ್ಯಕ್ಷ ಪಟ್ಲ ಸತೀಶ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಯಕ್ಷ ರಂಗದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಕಲಾವಿದರ ಶ್ರೆಯೋಭಿವೃದ್ಧಿಗೆ ಶ್ರಮಿಸುತ್ತಿರುವ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಈ ಬಾರಿ ಪಟ್ಲ ಪ್ರಶಸ್ತಿ ಒಂದು ಲಕ್ಷ ನಗದು ಒಳಗೊಂಡಿರುತ್ತದೆ, ಜೊತೆಗೆ ಕೀರ್ತಿಶೇಷ ಕುಬಣೂರು ಶ್ರೀಧರ ರಾವ್‌ರವರಿಗೆ 25 ಸಾವಿರ ನಗದು ಮರಣೋತ್ತರ ಪ್ರಶಸ್ತಿ, ವೃತ್ತಿ ಕಲಾವಿದರಾದ ಕುರಿಯ ಗಣಪತಿ ಶಾಸ್ತ್ರಿ, ಅರ್ಗೋಡು ಮೋಹನ್ ದಾಸ್ ಶೆಣೈ, ಎಂ.ಕೆ .ರಮೇಶ್ ಆಚಾರ್ಯ, ಆನಂದ ಶೆಟ್ಟಿ ಯರಬೈಲು, ಕುತ್ತೊಟ್ಟು ವವಾಸು ಶೆಟ್ಟಿ, ಪಾರೆಕೋಡಿ ಗಣಪತಿ ಭಟ್, ಮಹಿಳಾ ಕಲಾವಿದೆಯರಾದ ಶೀಲಾ ಕೆ.ಶೆಟ್ಟಿ, ಮಹಾಲಕ್ಷ್ಮೀ ಡಿ.ರಾವ್ ಮೊದಲಾದವರಿಗೆ ಯಕ್ಷದ್ರುವ ಕಲಾ ಗೌರವ ನೀಡಲಾಗುವುದು. ಅಶಕ್ತ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಯಕ್ಷಗಾನ ಕಲಾವಿದರ ಪ್ರತಿಭಾವಂತ ಮಕ್ಕಳಿಗೆ ಬಂಗಾರದ ಪದಕದೊಂದಿಗೆ ಪುರಸ್ಕಾರ, ತೆಂಕು ಬಡಗಿನ ಹತ್ತು ಸಂತ್ರಸ್ತ ಕಲಾವಿದರಿಗೆ ತಲಾ 50 ಸಾವಿರ ಗೌರವಧನ, ಎಂಟು ಮಂದಿ ಕಲಾವಿದರಿಗೆ ಗೃಹ ನಿರ್ಮಾಣ ಯೋಜನೆಗೆ ತಲಾ 25 ಸಾವಿರ ಸಹಾಯ ಧನ, ಯಕ್ಷಗಾನ ಕೃತಿ ಪ್ರಕಾಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸತೀಶ್ ಶೆಟ್ಟಿ ತಿಳಿಸಿದ್ದಾರೆ.

ಪಟ್ಲಾಶ್ರಯ ಯೋಜನೆಯ ಮೂಲಕ ಇಬ್ಬರು ಅಶಕ್ತ ಕಲಾವಿದರಿಗೆ ಮನೆ ನಿರ್ಮಾಣ ಯೋಜನೆ ಪುರ್ಣಗೊಳಿಸಲಾಗಿದೆ. ನಿವೇಶನ ರಹಿತ ನೂರು ಮಂದಿ ಕಲಾವಿದರಿಗೆ ನಿವೇಶನ ನಿರ್ಮಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ, ಸುಮಾರು 300 ಮಂದಿ ಕಲಾವಿದರಿಗೆ ಅಪಘಾತ ವಿಮಾಯೋಜನೆ ಮಾಡಲಾಗಿದೆ
ಎಂದು ಸತೀಶ್ ಶೆಟ್ಟಿ ತಿಳಿಸಿದ್ದಾರೆ.

ಪಟ್ಲ ಸಂಭ್ರಮ: ಪಟ್ಲ ಸಂಭ್ರಮ ಮೇ 27ರಂದು ಬೆಳಗ್ಗೆ 9.45ಕ್ಕೆ ಉದ್ಘಾಟನೆ ನಡೆಯಲಿದೆ. ಯಕ್ಷಗಾನದ ಅಬ್ಬರ ತಾಳ, ಚೆಂಡೆ ಜುಗಲ್ ಬಂದಿ, ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2ರ ತನಕ ಯಕ್ಷಗಾನ ಕಲಾವಿದರಿಗೆ ಹಾಗೂ ಅವರ ಮನೆಯವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಯಕ್ಷ ಸಪ್ತಸ್ವರ,ಮಹಿಳಾ ಯಕ್ಷಗಾನ, ತಾಳ ಮದ್ದಳೆ, ಯಕ್ಷ ಮಿತ್ರರು ದುಬೈ ಮಕ್ಕಳ ತಂಡದಿಂದ ಯಕ್ಷಗಾನ, ಕುಮಾರಿ ಸಾನ್ವಿ ಮುಂಬಯಿಯವರಿಂದ ಯಕ್ಷಗಾನ ನೃತ್ಯ ನಡೆಯಲಿದೆ. ಸಿನಿಮಾ ನಟರಾದ ದರ್ಶನ್, ಋಷಬ್ ಶೆಟ್ಟಿ ಮೆರಗು ನೀಡಲಿದ್ದಾರೆ ಎಂದು ಪಟ್ಲ ಸತೀಶ್ ತಿಳಿಸಿದ್ದಾರೆ.

ಸುದ್ದಿಗೊಷ್ಠಿಯಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳಾದ ಕದ್ರಿ ನವನೀತ ಶೆಟ್ಟಿ, ಪುರುಷೋತ್ತಮ ಭಂಡಾರಿ, ಆರತಿ ಆಳ್ವ, ಪೂರ್ಣಿಮಾ ಯತೀಶ್ ರೈ, ಡಾ.ಮನುರಾವ್, ಉದಯ ಕುಮಾರ್ ಶೆಟ್ಟಿ, ಸುಧೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News