ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಸಕಾಲ: ಫಾರೂಕ್ ಅಬ್ದುಲ್ಲಾ

Update: 2018-05-22 15:45 GMT

ಶ್ರೀನಗರ, ಮೇ 22: ಜಮ್ಮುವಿನಲ್ಲಿ ಬಿಜೆಪಿ ಮುಖಂಡರು ಒಳಗೊಂಡಿದ್ದಾರೆ ಎನ್ನಲಾಗಿರುವ ಜಮೀನು ಹಗರಣದ ಬಗ್ಗೆ ಮುಖ್ಯಮಂತ್ರಿಯ ಮೌನವನ್ನು ಪ್ರಶ್ನಿಸಿರುವ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ರಾಜ್ಯದಲ್ಲಿ ತಕ್ಷಣ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಮ್ಮ ಪಕ್ಷವು ರಾಷ್ಟ್ರಪತಿ ಆಡಳಿತವನ್ನು ಸಮರ್ಥಿಸುತ್ತಿಲ್ಲ. ಆದರೆ ಈಗ ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಿಡಿಪಿ-ಬಿಜೆಪಿ ಆಡಳಿತಾವಧಿಯಲ್ಲಿ ಹೆಚ್ಚುತ್ತಿರುವ ಅಶಾಂತಿಯ ಪರಿಸ್ಥಿತಿ ಅರಾಜಕತೆ ಸ್ಥಿತಿಗೆ ತಲುಪುವ ಸಾಧ್ಯತೆಯಿದೆ. ಆದ್ದರಿಂದ ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. 2016ರಲ್ಲಿ ಮುಖ್ಯಮಂತ್ರಿಯಾಗಿದ್ದ ಮುಫ್ತಿ ಮುಹಮ್ಮದ್ ಸಯೀದ್ ನಿಧನದ ಬಳಿಕ ಜನವರಿಯಿಂದ ಎಪ್ರಿಲ್‌ವರೆಗೆ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿತ್ತು. ಆ ಅವಧಿಯಲ್ಲಿ ಅತ್ಯುತ್ತಮ ಆಡಳಿತ ನಿರ್ವಹಣೆಯಿಂದ ರಾಜ್ಯದ ಜನತೆ ನೆಮ್ಮದಿಯಿಂದಿದ್ದರು. ಆದರೆ ಈಗ ರಾಜ್ಯದ ಮೂರೂ ಪ್ರದೇಶಗಳಿಗೆ ದ್ರೋಹ ಬಗೆಯಲಾಗಿದೆ. ಆಡಳಿತ ಯಂತ್ರ ಸ್ಥಗಿತವಾಗಿದ್ದು ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ ಎಂದು ಫಾರೂಕ್ ಆರೋಪಿಸಿದರು.

ಜಮ್ಮುವಿನ ನಗ್ರೋಟದ ಸೇನಾ ಶಸ್ತ್ರಾಸ್ತ್ರ ಸಂಗ್ರಹಾಗಾರದ ಬಳಿಯ ಜಮೀನನ್ನು ಸಂಸ್ಥೆಯೊಂದರ ಹೆಸರಿನಲ್ಲಿ ಉಪಮುಖ್ಯಮಂತ್ರಿ ಕವೀಂದರ್ ಗುಪ್ತ, ವಿಧಾನಸಭೆಯ ಸ್ಪೀಕರ್ ನಿರ್ಮಲ್ ಸಿಂಗ್ ಸೇರಿದಂತೆ ಬಿಜೆಪಿ ಮುಖಂಡರು ಖರೀದಿಸಿರುವ ವಿವಾದವನ್ನು ಉಲ್ಲೇಖಿಸಿದ ಅಬ್ದುಲ್ಲಾ, ಈ ಬಗ್ಗೆ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದರು. ನಗ್ರೋಟ ಪ್ರದೇಶದಲ್ಲಿ ನಿರ್ಮಲ್ ಸಿಂಗ್ 2,000 ಚದರ ಮೀಟರ್ ನಿವೇಶನದಲ್ಲಿ ಮನೆ ನಿರ್ಮಿಸುತ್ತಿದ್ದು ಈ ಭೂಮಿ ಸೇನಾ ಶಸ್ತ್ರಾಸ್ತ್ರ ಸಂಗ್ರಹಾಗಾರಕ್ಕೆ ಸೇರಿದ 12 ಎಕರೆ ಪ್ರದೇಶದ ಭಾಗವಾಗಿದೆ ಎಂದು ಜಮ್ಮುವಿನ 16 ಕಾರ್ಪ್ಸ್‌ನ ಕಮಾಂಡರ್ ಲೆಜ ಸರಣ್‌ಜೀತ್ ಸಿಂಗ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸೇನಾ ಶಸ್ತ್ರಾಸ್ತ್ರ ಸಂಗ್ರಹಾಗಾರದ ಬಳಿ ವಸತಿಗೃಹ ನಿರ್ಮಿಸುವುದರಿಂದ ಭದ್ರತೆಯ ಸಮಸ್ಯೆ ಎದುರಾಗುತ್ತದೆ ಎಂದು ಸರಣ್‌ಜೀತ್ ಸಿಂಗ್ ಹೇಳಿದ್ದು, ವಸತಿ ನಿರ್ಮಾಣದ ವಿರುದ್ಧ ಸೇನೆಯು ಜಮ್ಮು ಕಾಶ್ಮೀರದ ಹೈಕೋರ್ಟ್‌ನಲ್ಲಿ ದೂರು ದಾಖಲಿಸಿದೆ. ಆದರೆ ಜಮೀನು ಖರೀದಿಯಲ್ಲಿ ಅಕ್ರಮ ನಡೆದಿಲ್ಲ ಎಂದು ನಿರ್ಮಲ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News