ಮಂಗಳೂರು; ಪಾಕ್ ಪರ ಘೋಷಣೆ ಆರೋಪ: ನಾಲ್ವರ ವಿಚಾರಣೆ

Update: 2018-05-22 17:11 GMT

ಮಂಗಳೂರು, ಮೇ 22: ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿ ಮುಂಭಾಗ ಮೇ 19ರಂದು ನಡೆದ ಕಾಂಗ್ರೆಸ್ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಕ್ ಪರ ಘೋಷಣೆ ಕೂಗಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ತನಿಖೆಯನ್ನು ಮಂಗಳೂರು ನಗರ ಸೆಂಟ್ರಲ್ ಉಪವಿಭಾಗದ ಎಸಿಪಿ ಎಂ. ಜಗದೀಶ್ ಅವರಿಗೆ ವಹಿಸಲಾಗಿದೆ.

ಕಾಂಗ್ರೆಸ್ ಕಚೇರಿ ಮುಂಭಾದ ಕಾಂಗ್ರೆಸ್ ಸಂಭ್ರಮಾಚರಣೆ ಸಂದರ್ಭದಲ್ಲಿ ಪಾಕ್ ಪರ ಘೋಷಣೆ ಕೂಗಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿತ್ತು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಂಭ್ರಮಾಚರಣೆಯ ವೀಡಿಯೋ ತಿರುಚಿ ಕೋಮು ಗಲಭೆಗೆ ಪ್ರೇರೇಪಣೆ ನೀಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಶಾಸಕ ಲೋಬೊ ನೇತೃತ್ವದಲ್ಲಿ ಕಮಿಷನರ್‌ಗೆ ದೂರು ನೀಡಿತ್ತು. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲೂ ಪ್ರತ್ಯೇಕ ದೂರು ದಾಖಲಾಗಿದ್ದವು.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದೂರುಗಳ ಆಧಾರದ ಹಿನ್ನೆಲೆಯಲ್ಲಿ 4 ಮಂದಿಯನ್ನು ಈಗಾಗಲೇ ವಿಚಾರಣೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಎಸಿಪಿಯವರು 6 ಮಂದಿಗೆ ನೋಟಿಸ್ ನೀಡಿದ್ದು, ಘಟನೆಯ ಬಗ್ಗೆ ವಿವರ ಕೇಳಿದ್ದಾರೆಂದು ಮೂಲಗಳು ತಿಳಿಸಿವೆ.
ಪೊಲೀಸರು ಈ ಪ್ರಕರಣದಲ್ಲಿ ತನಿಖೆ ಅನುಕೂಲವಾಗುವಂತೆ ಫೇಸ್ ಬುಕ್ ಸಂಸ್ಥೆಯಿಂದಲೂ ಮಾಹಿತಿ ಸಂಗ್ರಹಿಸಲಿದ್ದಾರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News