×
Ad

ಭಟ್ಕಳ : ನೂತನ ಶಾಸಕ ಸುನಿಲ್ ನಾಯ್ಕರಿಗೆ ಅಭಿನಂದನೆ ಕಾರ್ಯಕ್ರಮ

Update: 2018-05-22 22:34 IST

ಭಟ್ಕಳ,ಮೇ 22: ಬಿಜೆಪಿ ಮಂಡಳದ ವತಿಯಿಂದ ನೂತನ ಶಾಸಕ ಸುನಿಲ್ ನಾಯ್ಕ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಮಂಡಳದ ಅಧ್ಯಕ್ಷ ರಾಜೇಶ ನಾಯ್ಕ ಅವರ ಅಧ್ಯಕ್ಷತೆಯಲ್ಲಿ  ಇಲ್ಲಿನ ಶ್ರೀ ನಾಗಯಕ್ಷೆ ಧರ್ಮದೇವಿ ಧರ್ಮಾರ್ಥ ಸಭಾ ಭವನದಲ್ಲಿ ನಡೆಯಿತು. 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನೂತನ ಶಾಸಕ ಸುನಿಲ್ ನಾಯ್ಕ ಬಿಜೆಪಿ ಪಕ್ಷ ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಗುರುತಿಸಿ ನನಗೆ ಭಟ್ಕಳ ಕ್ಷೇತ್ರದ ವಿಧಾನ ಸಭಾ ಚುನಾವಣೆಗೆ ಟಿಕೆಟ್ ನೀಡಿ ಅತ್ಯಂತ ಜವಾಬ್ದಾರಿಯುತ ಕೆಲಸವನ್ನು ವಹಿಸಿತ್ತು. ನಾನು ಅದನ್ನು ನಿಭಾಯಿಸಲು ಶಕ್ತನೋ ಎನ್ನುವ ಅನುಮಾನವಿದ್ದರೂ ಕಾರ್ಯಕರ್ತರ ಹುಮ್ಮಸ್ಸು, ಹಿರಿಯರ ಮಾರ್ಗದರ್ಶನ ನಾನದನ್ನು ಸರಿಯಾಗಿ ನಿಭಾಯಿಸುವಂತಾಗಿದೆ.  ಇಂದು ಈ ಗೆಲುವಿಗೆ ನನ್ನ ಎಲ್ಲ ಕಾರ್ಯಕರ್ತ ಬಂಧುಗಳೇ ಕಾರಣ. ಕಾರ್ಯಕರ್ತರು, ಮತದಾರರು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಎಂದೂ ಧಕ್ಕೆ ಬಾರದಂತೆ ಕ್ಷೇತ್ರದ ಕೆಲಸ ಮಾಡುವೆ ಎಂದರು. 

ಕಳೆದ ಸುಮಾರು ನಾಲ್ಕು ವರ್ಷಗಳ ಹಿಂದೆ ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ. ಸೇರಿದ್ದು ಪಕ್ಷ ನನಗೆ ಅಲ್ಪ ಅವಧಿಯಲ್ಲಿ ಜಿಲ್ಲಾ ಯುವ ಮೋರ್ಚಾದ ಜವಾಬ್ದಾರಿ ನೀಡಿತು. ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ ನಾನು ಕ್ಷೇತ್ರದಲ್ಲಿ ಬಿಜೆಪಿಯನ್ನು ಬೂತ್ ಮಟ್ಟದಿಂದ ಸಾಮಾನ್ಯ ಕಾರ್ಯಕರ್ತನಂತೆ ಬೆಳೆಸಿದ್ದು ನನಗೆ ಟಿಕೆಟ್ ದೊರೆಯುವ ತನಕ ಬಂದು ನಿಂತಿತು ಎಂದ ಅವರು ಪಕ್ಷದಲ್ಲಿ ಜವಾಬ್ದಾರಿ ಕೊಡುವುದರಿಂದ ಹಿಡಿದು ಟಿಕೆಟ್ ಪಡೆಯುವ ತನಕ ಸಹಕರಿಸಿದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರನ್ನು ಸ್ಮರಿಸಿಕೊಂಡರು.  ತಮ್ಮ ಗೆಲುವಿಗೆ ಶ್ರಮಿಸಿದ ಎಲ್. ಎಸ್. ನಾಯ್ಕ, ಮಳ್ಳಾ ನಾಯ್ಕ, ಮಾದೇವ ನಾಯ್ಕ ಸೇರಿದಂತೆ ಅನೇಕರನ್ನ ನೆನಪಿಸಿ ಕೃತಜ್ಞತೆಯನ್ನು ಸಲ್ಲಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜೆ. ನಾಯ್ಕ ಮಾತನಾಡಿ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕು ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ಸಾಧಿಸಿದ್ದರೂ ಸಹ ಭಟ್ಕಳದಲ್ಲಿ ಗೆಲುವು ಸಾಧಿಸಿರುವುದು ಪಕ್ಷಕ್ಕೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ.  ಜಿಲ್ಲೆಯಲ್ಲಿ ನಾವು ಎರಡು ಸ್ಥಾನಗಳನ್ನು ಕಳೆದು ಕೊಂಡರೂ ಸಹ ಅದು ಅತ್ಯಲ್ಪ ಮತಗಳ ಅಂತರದ ಸೋಲಾಗಿದ್ದು ಅಲ್ಲಿಯೂ ತಾತ್ವಿಕವಾಗಿ ಗೆಲುವು ನಮ್ಮದೇ ಎಂದರು. 

ಕ್ಷೇತ್ರ ಚುನಾವಣಾ ಉಸ್ತುವಾರಿ ವಿನೋದ ಪ್ರಭು ಕುಮಟಾ ಅವರು ಮಾತನಾಡಿ ಎಷ್ಟೇ ದೊಡ್ಡ ಹುದ್ದೆಗೇರಿದರೂ ತಾನು ಸಾಮಾನ್ಯ ಎಂದು ತಿಳಿದಾಗ ಮಾತ್ರ ಆತ ಆ ಹುದ್ದೆಯಲ್ಲಿ ಮತ್ತು ಎತ್ತರಕ್ಕೇರಲು ಸಾಧ್ಯವಾಗುವುದು.  ಹುದ್ದೆ ದೊರೆತ ತಕ್ಷಣ ಅಹಂಕಾರಿಯಾಗಿ, ನಾನೇ ದೊಡ್ಡ ವ್ಯಕ್ತಿ ಎಂದು ತಿಳಿದರೆ ಮತ್ತೆ ಮೇಲೇರಲು ಸಾಧ್ಯವಾಗುವುದಿಲ್ಲ. ಸುನಿಲ್ ನಾಯ್ಕ ಜನರೊಂದಿಗೆ ಇದ್ದು ಜನರ ಸಂಕಷ್ಟಗಳಿಗೆ ಸ್ಪಂಧಿಸುತ್ತಾ ಇನ್ನೂ ಎತ್ತರದ ಸ್ಥಾನಕ್ಕೇರಲಿ ಎಂದು ಹಾರೈಸಿದರು. 

ಮಾಜಿ ಸಚಿವ ಶಿವಾನಂದ ನಾಯ್ಕ, ಹೊನ್ನಾವರ ಮಂಡಳ ಅಧ್ಯಕ್ಷ ಸುಬ್ರಾಯ ನಾಯ್ಕ, ಬಿ.ಜೆ.ಪಿ. ಪ್ರಮುಖ ಕೃಷ್ಣಾ ನಾಯ್ಕ ಆಸರಕೇರಿ ಮುಂತಾದವರು ಮಾತನಾಡಿದರು. 

ವೇದಿಕೆಯಲ್ಲಿ ಉಮೇಶ ನಾಯ್ಕ, ಪರಮೇಶ್ವರ ದೇವಡಿಗ, ಎಂ.ವಿ. ಹೆಬಳೆ, ಜಿ.ಪಂ. ಸದಸ್ಯೆ ನಾಗಮ್ಮ, ಸವಿತಾ ಗೊಂಡ, ಮಾಲತಿ ದೇವಡಿಗ, ಕಾವೇರಿ ದೇವಡಿಗ, ಶಿವಾನಿ ಶಾಂತಾರಾಮ್, ಗಣೇಶ ಆಚಾರ್ಯ, ನಾರಾಯಣ ಭಟ್ಟ, ಚಂದ್ರು ಗೊಂಡ, ಎನ್. ಡಿ. ಖಾರ್ವಿ, ಶ್ರೀಧರ ಮೊಗೇರ, ಶಂಕರ ಶೇಟ್, ಎಂ.ಜಿ.ನಾಯ್ಕ, ಮಂಜುನಾಥ ನಾಯ್ಕ, ಈಶ್ವರ ದೊಡ್ಮನೆ, ಈಶ್ವರ ಎನ್. ನಾಯ್ಕ, ಕೃಷ್ಣ ಮೊಗೇರ,  ಸುಬ್ರಾಯ ನಾಯ್ಕ ಕಾಯ್ಕಿಣಿ,  ಮುಂತಾದವರು ಉಪಸ್ಥಿತರಿದ್ದರು. 

ಯಮುನಾ ನಾಯ್ಕ ವಂದೇ ಮಾತರಂ ಹಾಡಿದರು. ಸುಬ್ರಾಯ ದೇವಡಿಗ ಸ್ವಾಗತಿಸಿದರು. ಡಿ.ಕೆ. ಜೈನ್ ನಿರ್ವಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News