ನಾಗರಿಕ ಸೇವೆ ಉದ್ಯೋಗ ಅರ್ಹತೆಗೆ ಹೊಸ ಮಾನದಂಡಕ್ಕೆ ಚಿಂತನೆ: ಕೇಂದ್ರ ಸರಕಾರದ ವಿರುದ್ಧ ಅಭ್ಯರ್ಥಿಗಳ ಆಕ್ರೋಶ

Update: 2018-05-22 17:39 GMT

ಹೊಸದಿಲ್ಲಿ, ಮೇ 22: ಈ ಹಿಂದೆ ಐಎಎಸ್ ಅಥವಾ ಐಪಿಎಸ್ ಸೇವೆಗೆ ಅರ್ಹರಾಗಲು ಕೇವಲ ಕೇಂದ್ರ ಸಾರ್ವಜನಿಕ ಸೇವಾ ಆಯೋಗ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದರೆ ಸಾಕಾಗುತ್ತಿತ್ತು. ಆದರೆ ಇದೀಗ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಗಮನಾರ್ಹ ಬದಲಾವಣೆಯನ್ನು ಮಾಡಲು ಹೊರಟಿದ್ದು ಈ ಕ್ಷೇತ್ರದ ಉದ್ಯೋಗಾಕಾಂಕ್ಷಿಗಳು ಅಸಮಾಧಾನಗೊಂಡಿದ್ದಾರೆ.

 ವಿವಿಧ ಸೇವಾ ವಲಯಗಳಾದ ಐಪಿಎಸ್, ಇಎಫ್‌ಎಸ್ ಅಥವಾ ಐಎಎಸ್‌ಗೆ ಅರ್ಹತೆ ಪಡೆಯಲು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣಗೊಂಡರೆ ಸಾಕಾಗುವುದಿಲ್ಲ ಬದಲಿಗೆ ಸರಕಾರ ಮೂರು ತಿಂಗಳ ಕಾಲ ನಡೆಸುವ ಫೌಂಡೇಶನ್ ಕೋರ್ಸ್‌ನಲ್ಲಿ ಈ ಅಭ್ಯರ್ಥಿಗಳ ನಿರ್ವಹಣೆಯ ಆಧಾರದಲ್ಲಿ ಅವರ ಆಯ್ಕೆ ಮಾಡಲಾಗುವುದು ಎಂದು ಕಳೆದ ವಾರ ಪ್ರಧಾನ ಮಂತ್ರಿ ಕಚೇರಿಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಆದರೆ ಈ ತರಬೇತಿಯ ವೇಳೆ ಅಭ್ಯರ್ಥಿಗಳಿಗೆ ಅಂಕವನ್ನು ನೀಡುವವರು ಯಾರು ಎಂಬ ಕುರಿತು ಸರಕಾರ ಸ್ಪಷ್ಟನೆಯನ್ನು ನೀಡಿಲ್ಲ. ಕೆಲವು ಅಭ್ಯರ್ಥಿಗಳ ಪ್ರಕಾರ, ಈ ಕೋರ್ಸ್‌ಗಳು ನಡೆಯುವ ಮಸ್ಸೂರಿಯ ಅಕಾಡೆಮಿಯ ತರಬೇತುದಾರರೇ ಅಭ್ಯರ್ಥಿಗಳಿಗೆ ಅಂಕ ನೀಡುವ ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಆದರೆ ಈ ವರ್ಷ ಯುಪಿಎಸ್‌ಸಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಮತ್ತು ಹಿಂದಿನ ಟಾಪರ್‌ಗಳ ಪ್ರಕಾರ ಈ ವಿಧಾನವು ಒಂದು ಅನಿಯಂತ್ರಿತ ಮೌಲ್ಯಮಾಪನವಾಗಿದ್ದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದ್ದ ಈ ಹಿಂದಿನ ಪಾರದರ್ಶಕ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಲಿದೆ.

ಈ ಹಿಂದೆ ಭಾರತೀಯ ಆಡಳಿತಾತ್ಮಕ ಸೇವೆಗೆ ಅತ್ಯಧಿಕ ಅಂಕಗಳ ವಿದ್ಯಾರ್ಥಿಗಳು ಆಯ್ಕೆಯಾದರೆ ಭಾರತೀಯ ವಿದೇಶ ಸೇವೆಗೆ ನಂತರದ ಸ್ಥಾನ ಹಾಗೂ ಕೊನೆಯಲ್ಲಿ ಭಾರತೀಯ ಪೊಲೀಸ್ ಸೇವೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿತ್ತು. ಈ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಡೆಯುವ ಸಾಧ್ಯತೆಯಿದೆ. ಈಗಿನ ವ್ಯವಸ್ಥೆಯಲ್ಲಿ ಉತ್ತಮ ಅಂಕ ಪಡೆದವರಷ್ಟೇ ಆಯಾ ಪದವಿಗೆ ಆಯ್ಕೆಯಾಗುತ್ತಾರೆ. ಆದರೆ ಸರಕಾರದ ಹೊಸ ಯೋಜನೆ ಜಾರಿಗೆ ಬಂದರೆ ನಮಗೆ ಬೇಕಾದ ಅಭ್ಯರ್ಥಿಯನ್ನು ತೀರ್ಪುಗಾರರ ಮೇಲೆ ಒತ್ತಡ ಹೇರುವ ಮೂಲಕ ಫೌಂಡೇಶನ್ ಕೋರ್ಸ್‌ನಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುವ ಮೂಲಕ ಆಯ್ಕೆ ಮಾಡಿಕೊಳ್ಳಬಹುದಾದ ಅಪಾಯವಿದೆ ಎಂದು ಯುಪಿಎಸ್‌ಸಿಯ ಮಾಜಿ ಸದಸ್ಯರು ಅಭಿಪ್ರಾಯಪಡುತ್ತಾರೆ. ಸದ್ಯ ಇದು ಕೇವಲ ಪ್ರಸ್ತಾವನೆ ಮಾತ್ರ. ಈ ಬಗ್ಗೆ ಎಲ್ಲರ ಅಭಿಪ್ರಾಯ ಪಡೆದ ನಂತರವೇ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಧಾನ ಮಂತ್ರಿಗಳ ಕಚೇರಿ ಸ್ಪಷ್ಟನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News