×
Ad

ಪ್ರಾಕೃತಿಕ ವಿಕೋಪ ನಿರ್ವಹಿಸಲು ಸಿದ್ದರಾಗಿ: ಉಡುಪಿ ಡಿಸಿ ಪ್ರಿಯಾಂಕ

Update: 2018-05-22 23:15 IST

ಉಡುಪಿ, ಮೇ 22: ಜಿಲ್ಲೆಯಲ್ಲಿ ಮುಂಗಾರು ಮಳೆಯ ಅವಧಿಯಲ್ಲಿ ಎದುರಾಗುವ ಪ್ರಾಕೃತಿಕ ವಿಕೋಪಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಎಲ್ಲಾ ಅಗತ್ಯ ಮುಂಜಾಗೃತಾ ಹಾಗೂ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಜಿಲ್ಲೆಯ ಎಲ್ಲಾ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮುಂಗಾರು ಮಳೆ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸುವ ಮತ್ತು ಅಗತ್ಯವಾದ ಎಲ್ಲಾ ಮುಂಜಾಗೃತಾ ಹಾಗೂ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಮಳೆಗಾಲದ ಸಂದರ್ಭದಲ್ಲಿ ಸಂಭವಿಸುವ ಅನಾಹುತಗಳಿಗೆ ತಕ್ಷಣದಲ್ಲಿ ಸ್ಪಂದಿಸಲು ನಗರ ಸ್ಥಳೀಯ ಸಂಸ್ಥೆಗಳ ವಾಪ್ತಿಯಲ್ಲಿ ಹಾಗೂ ಎಲ್ಲಾ 7 ತಾಲೂಕುಗಳಲ್ಲಿ 24 ಗಂಟೆಯ ತುರ್ತು ಕಂಟ್ರೋಲ್ ರೂಂಗಳನ್ನು ಆರಂಭಿಸಿ, ಸದಾ ಕಾಲ ಈ ಕಂಟ್ರೋಲ್ ರೂಂನಲ್ಲಿ ಮುಳುಗು ತಜ್ಞರು ಸೇರಿದಂತೆ ಎಲ್ಲಾ ಅಗತ್ಯ ಸಿಬ್ಬಂದಿಗಳು ಸನ್ನದರಾಗಿರಬೇಕು ಎಂದರು.

ನೆರೆ ಬರುವ ಪ್ರದೇಶಗಳಲ್ಲಿ ಅಗತ್ಯ ದೋಣಿಯ ವ್ಯವಸ್ಥೆಯನ್ನು ಸಿದ್ದವಾಗಿಟ್ಟುಕೊಳ್ಳಬೇಕು. ಎಲ್ಲಾ ಅಧಿಕಾರಿಗಳು ತಮ್ಮ ಮೊಬೈಲ್‌ಗಳನ್ನು ಯಾವುದೇ ಕಾರಣಕ್ಕೂ ಸ್ವಿಚ್‌ಆಫ್ ಮಾಡಬಾರದು ಹಾಗೂ ಕೇಂದ್ರಸ್ಥಾನವನ್ನು ಬಿಟ್ಟು ತೆರಳಬಾರದು. ಸಂತ್ರಸ್ಥರ ನೆರವಿಗೆ ತಕ್ಷಣವೇ ಸ್ಪಂದಿಸಬೇಕೆಂದು ಜಿಲ್ಲಾಧಿಕಾರಿ ಆದೇಶಿಸಿದರು.

ತಕ್ಷಣವೇ ಪರಿಹಾರ ನೀಡಿ:  ಮಳೆಯಿಂದ ಜೀವ ಹಾನಿ, ಆಸ್ತಿ ಹಾನಿ ಹಾಗೂ ಜಾನುವಾರು ಹಾನಿಯ ಪರಿಹಾರದ ನೀಡುವ ಕುರಿತಂತೆ ಶೀಘ್ರದಲ್ಲಿ ವರದಿ ತಯಾರಿಸಿ, ಪರಿಹಾರದ ಹಣವನ್ನು ಬಿಡುಗಡೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಲ್ಲಾ ತಹಶೀಲ್ದಾರ್‌ಗಳಿಗೆ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಗಾಲದಲ್ಲಿ ನೀರು ನಿಲ್ಲದಂತೆ ಹಾಗೂ ರಸ್ತೆಯ ಬದಿಯಲ್ಲಿ ಮಣ್ಣು ಕುಸಿತ ಸಂಭವಿಸದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿ ಗಳಿಗೆ ತಿಳಿಸಿದರು.

ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ತೆರೆದ ಗುಂಡಿ ಹಾಗೂ ಲೈಸೆನ್ಸ್ ಮುಗಿದ ಕಲ್ಲುಕೋರೆಗಳಿಗೆ ಸೂಕ್ತ ಬೇಲಿ ಅಳವಡಿಸಿ, ಎಚ್ಚರಿಕೆ ಫಲಕಗಳನ್ನು ಅಳವಡಿಸ ಬೇಕು. ಕಲ್ಲುಕೋರೆಗಳ ಮಾಲಕರಿಗೆ ಸೂಕ್ತ ಬೇಲಿ ಹಾಗೂ ಎಚ್ಚರಿಕೆ ಫಲಕ ಅಳವಡಿಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಗ್ರಾಪಂ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಮೆಸ್ಕಾಂ ಇಲಾಖೆಯಿಂದ ಉತ್ತಮ ಸೇವೆ ಒದಗಿಸಬೇಕು ಹಾಗೂ ಅಗ್ನಿ ಶಾಮಕ ಇಲಾಖೆ ತುರ್ತು ಸಂದರ್ಭದಲ್ಲಿ ಅಗತ್ಯವಿರುವ ಎಲ್ಲಾ ಉಪಕರಣ ಗಳೊಂದಿಗೆ ಸಿದ್ದ ಇರಬೇಕು. ಕಿಂಡಿ ಅಣೆಕಟ್ಟುಗಳಿಗೆ ಅಳವಡಿಸಿರುವ ಹಲಗೆ ತೆಗೆದು ಅವುಗಳನ್ನು ಸೂಕ್ತ ರೀತಿಯಲ್ಲಿ ಮರು ಬಳಕೆಗೆ ಶೇಖರಿಸಬೇಕು ಹಾಗೂ ಸಮುದ್ರ ಕೊರೆತ ತಡೆ ಕುರಿತಂತೆ ಕೈಗೊಳ್ಳಲಾಗಿರುವ ಕಾಮಗಾರಿ ಗಳನ್ನು ಶೀಘ್ರದಲ್ಲಿ ಮುಗಿಸಬೇಕು ಎಂದರು.

ಎಲ್ಲಾ ತಾಲೂಕುಗಳಲ್ಲಿ ರಚಿಸಲಾಗುವ ಕಂಟ್ರೋಲ್ ರೂಂಗಳಿಗೆ ನೋಡಲ್ ಅಧಿಕಾರಿಯನ್ನು ನೇಮಿಸಬೇಕು ಹಾಗೂ ತುರ್ತು ಸಂಭರ್ದಲ್ಲಿ ಕಾರ್ಯ ನಿರ್ವಹಿಸುವ ತಂಡಕ್ಕೆ ಪ್ರಥಮ ಚಿಕಿತ್ಸಾ ಕಿಟ್, ರಾತ್ರಿ ವೇಳೆ ಕಾರ್ಯ ನಿರ್ವಹಿಸಲು ಬ್ಯಾಟರಿ ಸೇರಿದಂತೆ ಎಲ್ಲಾ ಅಗತ್ಯ ಉಪಕರಣಗಳನ್ನು ಒದಗಿಸ ಬೇಕು ಎಂದು ತಹಶೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಯಾವುದೇ ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ಅಗತ್ಯ ಔಷಧಗಳ ದಾಸ್ತಾನು ಲಭ್ಯ ಇರುವಂತೆ ನೋಡಿಕೊಳ್ಳ ಬೇಕು ಎಂದು ಜಿಲ್ಲಾಧಿಕಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಕುಂದಾಪುರ ಉಪ ವಿಭಾಗಾಧಿಕಾರಿ ಭೂಬಾಲನ್, ಅಪರ ಜಿಲ್ಲಾಧಿಕಾರಿ ಅನುರಾಧ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಭಾರೀ ಮಳೆ ಬಂದರೆ ಶಾಲೆಗೆ ರಜೆ ನೀಡಿ
ಜಿಲ್ಲೆಯ ಎಲ್ಲಾ ಸರಕಾರಿ ಶಾಲೆಗಳನ್ನು ಸೂಕ್ತ ರೀತಿಯಲ್ಲಿ ದುರಸ್ತಿ ಮಾಡಿಸ ಬೇಕು. ಶಾಲಾ ಮಕ್ಕಳು ನಡೆದುಕೊಂಡು ಬರುವ ಹಾದಿಯಲ್ಲಿ ಯಾವುದೇ ಅಪಾಯಕಾರಿ ಗುಂಡಿಗಳಿರುವ ಕುರಿತು ಮಕ್ಕಳಿಂದ ಮಾಹಿತಿ ಪಡೆದು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು.

ಶಾಲಾ ವಾಹನಗಳ ಚಾಲಕರಿಗೆ ಸುರಕ್ಷಿತವಾಗಿ ಮಕ್ಕಳನ್ನು ಶಾಲೆಗೆ ತಲುಪಿಸು ವಂತೆ ಸೂಚನೆ ನೀಡಬೇಕು. ನಿಗದಿತ ಸಮಯದಲ್ಲಿ ಶಾಲೆಗೆ ತಲುಪಲು ಸಾಧ್ಯವಾಗದ ಸಂದರ್ಭದಲ್ಲಿ ಮಕ್ಕಳ ಮೇಲೆ ಹಾಗೂ ಪಾಲಕರ ಮೇಲೆ ಒತ್ತಡ ಹೇರಬಾರದು ಎಂದು ಅವರು ಶಾಲಾ ಆಡಳಿತ ಮಂಡಳಿಗೆ ಸೂಚಿಸಿದರು.
ಹೆಚ್ಚಿನ ಮಳೆ ಇದ್ದ ಸಂದರ್ದಲ್ಲಿ ಜಿಲ್ಲಾಡಳಿತದ ಅನುಮತಿ ಪಡೆದು ಶಾಲೆಗಳಿಗೆ ರಜೆ ನೀಡಬೇಕು. ಶಾಲೆ ಪ್ರಾರಂಭವಾಗುವ ಮುಂಚೆ ಜಿಲ್ಲೆಯ ಎಲ್ಲಾ ಖಾಸಗಿ ಹಾಗೂ ಸರಕಾರಿ ಶಾಲೆಗಳು, ಶಾಲಾ ಮಕ್ಕಳ ಸುರಕ್ಷತಾ ಸಭೆ ಯನ್ನು ನಡೆಸಿ ವರದಿ ನೀಡಬೆೀಕು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News