ಶ್ರೀನಗರ ಹೋಟೆಲ್ ನಲ್ಲಿ ಯುವತಿ ಜೊತೆ ಇದ್ದ ಸೇನಾಧಿಕಾರಿ ಪೊಲೀಸ್ ವಶಕ್ಕೆ

Update: 2018-05-23 11:30 GMT

ಶ್ರೀನಗರ, ಮೇ 23: ಕಳೆದ ವರ್ಷ ಯುವಕನೊಬ್ಬನನ್ನು ತನ್ನ ಜೀಪ್‌ನ ಮುಂದೆ ಮಾನವ ಕವಚದಂತೆ ಕಟ್ಟಿಹಾಕಿ ಸುದ್ದಿ ಮಾಡಿದ್ದ ಮೇಜರ್ ಲೀತುಲ್ ಗೊಗೊಯಿಯನ್ನು ಶ್ರೀನಗರದ ಹೊಟೇಲೊಂದರಿಂದ ಯುವತಿ ಜೊತೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ.

ಪೊಲೀಸ್ ಮೂಲಗಳ ಪ್ರಕಾರ, ಕೇಂದ್ರ ಕಾಶ್ಮೀರದ ಬುಡ್ಗಾಂಮ್ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಗೊಗೊಯಿ ವಿರುದ್ಧ ಕಾನೂನು ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಹೊಟೇಲ್ ಗ್ರಾಂಡ್ ಮಮ್ತಾದಲ್ಲಿ ಗಲಾಟೆ ನಡೆಯುತ್ತಿದೆ ಎಂದು ಖನ್ಯಾರ್ ಪೊಲೀಸ್ ಠಾಣೆಗೆ ಬೆಳಿಗ್ಗೆ ಹನ್ನೊಂದು ಗಂಟೆಗೆ ಹೊಟೇಲ್‌ನಿಂದ ಕರೆ ಬಂದಿತ್ತು.

 ಅದಾಗಲೇ ಆ ಹೊಟೇಲ್‌ನಲ್ಲಿ ಕೋಣೆಯನ್ನು ಗೊತ್ತುಪಡಿಸಿದ್ದ ಮೇಜರ್ ಗೊಗೊಯಿಯನ್ನು ಭೇಟಿ ಮಾಡಲು ಸಮೀರ್ ಅಹಮದ್ ಎಂಬ ವ್ಯಕ್ತಿ ಯುವತಿಯ ಜೊತೆ ಆಗಮಿಸಿದ್ದ. ಆದರೆ ಹೊಟೇಲ್ ಮ್ಯಾನೇಜರ್ ಆ ಯುವತಿಯನ್ನು ಕೋಣೆಗೆ ಹೋಗಲು ಬಿಡಲಿಲ್ಲ. ಇದು ಘರ್ಷಣೆಗೆ ಕಾರಣವಾಗಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮೇಜರ್ ಸೇರಿದಂತೆ ಘರ್ಷಣೆಗೆ ಕಾರಣರಾದ ಎಲ್ಲರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಯುವತಿಯು ಸೇನಾ ಅಧಿಕಾರಿಯನ್ನು ಭೇಟಿ ಮಾಡಲು ಆಗಮಿಸಿದ್ದಳು ಎಂದು ನಂತರ ಪೊಲೀಸರಿಗೆ ತಿಳಿದುಬಂದಿದೆ.

ಪೊಲೀಸರು ಸೇನಾ ಅಧಿಕಾರಿಯ ಗುರುತು ಮತ್ತು ಇತರ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಮೇಜರ್ ಅವರ ಹೇಳಿಕೆಯನ್ನು ಪಡೆದ ನಂತರ ಪೊಲೀಸರು ಅವರನ್ನು ಸೇನಾ ವಿಭಾಗಕ್ಕೆ ಒಪ್ಪಿಸಿದ್ದಾರೆ. ಯುವತಿಯ ಹೇಳಿಕೆಯನ್ನೂ ಪಡೆಯಲಾಗಿದ್ದು ಸದ್ಯ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಡುಕೋರ ನಿಗ್ರಹ ಕಾರ್ಯಾಚರಣೆಗಳನ್ನು ಸಮರ್ಥವಾಗಿ ನಡೆಸಿದ ಕಾರಣಕ್ಕಾಗಿ ಮೇಜರ್ ಗೊಗೊಯಿಗೆ ಇತ್ತೀಚೆಗೆ ಸೇನಾ ಮುಖ್ಯಸ್ಥರ ಶ್ಲಾಘನಾ ಪತ್ರವನ್ನು ನೀಡಿ ಗೌರವಿಸಲಾಗಿತ್ತು. ಈ ಪತ್ರವು, ಮೇಜರ್ ಗೊಗೊಯಿ ವ್ಯಕ್ತಿಯೊಬ್ಬನನ್ನು ತಮ್ಮ ವಾಹನದ ಮುಂಭಾಗಕ್ಕೆ ಕವಚದಂತೆ ಕಟ್ಟಿಹಾಕಿದ ಘಟನೆಯ ಸಮರ್ಥನೆಯಾಗಿದೆ ಎಂದೇ ತಿಳಿಯಲಾಗಿದೆ. ಕಳೆದ ವರ್ಷ ಎಪ್ರಿಲ್ 9ರಂದು ಶ್ರೀನಗರ ಲೋಕಸಭಾ ಉಪಚುನಾವಣೆಯ ಸಮಯದಲ್ಲಿ ನಡೆದ ಈ ಘಟನೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News