ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲನ್ಸ್ ಉಳಿಸಿಕೊಳ್ಳಲಾಗದೇ ದಂಡ ತೆರುತ್ತಿದ್ದೀರಾ...?

Update: 2018-05-23 12:32 GMT

‘‘ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲನ್ಸ್ ಉಳಿಸಿಕೊಳ್ಳಲು ಬಯಸುವುದಿಲ್ಲವೇ ಮತ್ತು ತಿಂಗಳಿಗೆ ನಾಲ್ಕಕ್ಕಿಂತ ಹೆಚ್ಚು ಸಲ ಹಣವನ್ನು ಹಿಂದೆಗೆದುಕೊಳ್ಳುವುದಿಲ್ಲವೇ? ಹಾಗಿದ್ದರೆ ಬಿಎಸ್‌ಬಿಡಿ ಖಾತೆಯನ್ನು ಆರಂಭಿಸಿ’’ ಎಂಬ ಭಾರತೀಯ ರಿಜರ್ವ್ ಬ್ಯಾಂಕಿನ ಎಸ್‌ಎಂಎಸ್ ಮೊಬೈಲ್ ಫೋನ್‌ಗಳಲ್ಲಿ ಹರಿದಾಡುತ್ತಿರುವುದನ್ನು ಹೆಚ್ಚಿನವರು ಗಮನಿಸಿರಬಹುದು.

ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆಗಳನ್ನು ಹೊಂದಿರುವ ಎಷ್ಟೋ ಜನರು ಖಾತೆಯಲ್ಲಿನ ಕನಿಷ್ಠ ಬ್ಯಾಲನ್ಸ್(ಎಂಎಬಿ)ನತ್ತ ಹೆಚ್ಚಿನ ಗಮನವನ್ನು ಹರಿಸುವುದಿಲ್ಲ ಮತ್ತು ಅದು ಕನಿಷ್ಠಕ್ಕಿಂತ ಕೆಳಗಿಳಿದು ದಂಡಗಳನ್ನು ತುಂಬುತ್ತಲೇ ಇರುತ್ತಾರೆ. ಈ ಕನಿಷ್ಠ ಬ್ಯಾಲನ್ಸ್ ಅನ್ನು ವಿವಿಧ ಬ್ಯಾಂಕುಗಳಲ್ಲಿ ವಿವಿಧ ಪ್ರಮಾಣದಲ್ಲಿ ನಿಗದಿಗೊಳಿಸಲಾಗಿದೆ. ಎಂಎಬಿಯನ್ನು ಕಾಯ್ದುಕೊಳ್ಳದಿದ್ದರೆ ದಂಡ ವಿಧಿಸುವ ನಿಯಮ ಗ್ರಾಹಕರ ಮುಂಡಾ ಮೋಚುತ್ತಿದ್ದರೆ ಬ್ಯಾಂಕ್‌ಗಳಿಗೆ ಲಾಭವನ್ನು ತರುತ್ತಿದೆ.

ಹೀಗೆ ದಂಡ ತೆತ್ತು ಸುಸ್ತಾಗಿರುವವರಿಗೆ ವರದಾನವಾಗಿದೆ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪಾಜಿಟ್(ಬಿಎಸ್‌ಬಿಡಿ) ಖಾತೆ. ಈ ಖಾತೆಯಲ್ಲಿ ಗ್ರಾಹಕರು ಕನಿಷ್ಠ ಶಿಲ್ಕನ್ನು ಕಾಯ್ದುಕೊಳ್ಳುವ ಅಗತ್ಯವಿಲ್ಲ. ಎಸ್‌ಬಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನಂತಹ ಕೆಲವು ಪ್ರಮುಖ ಬ್ಯಾಂಕ್‌ಗಳು ಗ್ರಾಹಕರಿಗೆ ಈ ಸೌಲಭ್ಯವನ್ನು ಒದಗಿಸುತ್ತಿವೆ.

ಬಿಎಸ್‌ಬಿಡಿಯಲ್ಲಿ ನೀವು ಖಾತೆಯಲ್ಲಿ ಉಳಿಸುವ ಹಣಕ್ಕೆ ಯಾವುದೇ ಕನಿಷ್ಠ ಅಥವಾ ಗರಿಷ್ಠ ಮಿತಿಗಳಿಲ್ಲ. ಈ ಖಾತೆಯನ್ನು ಹೊಂದಿದ ಗ್ರಾಹಕರಿಗೆ ಇತರ ಸೌಲಭ್ಯಗಳ ಜೊತೆಗೆ ಡೆಬಿಟ್ ಕಾರ್ಡ್, ಎಟಿಎಂ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್ ಸೌಲಭ್ಯಗಳೂ ಲಭ್ಯವಿವೆ.

ಖಾತೆಯನ್ನು ಒಬ್ಬರ ಹೆಸರಿನಲ್ಲಿ ಅಥವಾ ಜಂಟಿ ಹೆಸರುಗಳಲ್ಲಿ ಆರಂಭಿಸಲು ಅವಕಾಶವಿದೆ. ಈ ಖಾತೆ ಮೂಲಕ ಗ್ರಾಹಕರು ತನ್ನ ಬ್ರಾಂಚ್ ನೆಟ್‌ವರ್ಕ್‌ನ್ನು ಸಂಪರ್ಕಿಸಬಹುದಾಗಿದೆ. ಶೂನ್ಯ ಶಿಲ್ಕು ಮತ್ತು ಉಚಿತ ರುಪೇ ಕಾರ್ಡ್ ಸೌಲಭ್ಯಗಳನ್ನು ಬ್ಯಾಂಕ್ ಒದಗಿಸುತ್ತದೆ ಎಂದು ಎಚ್‌ಡಿಎಫ್‌ಸಿ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ.

ಎಸ್‌ಬಿಐ ಇಂತಹ ಖಾತೆಗಳಲ್ಲಿ ಒಂದು ಕೋ.ರೂ.ವರೆಗೆ ಬ್ಯಾಲನ್ಸ್ ಇದ್ದರೆ ವಾರ್ಷಿಕ ಶೇ.3.50 ಮತ್ತು ಅದಕ್ಕಿಂತ ಹೆಚ್ಚಿದ್ದರೆ ಶೇ.4 ಬಡ್ಡಿಯನ್ನು ನೀಡುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್ 50 ಲ.ರೂ. ಮತ್ತು ಅಧಿಕವಿದ್ದರೆ ಶೇ.4 ಮತ್ತು ಅದಕ್ಕಿಂತ ಕಡಿಮೆಯಿದ್ದರೆ ಶೇ.3.5 ಬಡ್ಡಿ ನೀಡುತ್ತದೆ.

ಈ ಖಾತೆಗಳ ಗ್ರಾಹಕರಿಗೆ ನೀಡಲಾಗುವ ಡೆಬಿಟ್ ಕಾರ್ಡ್‌ಗಳು ಉಚಿತವಾಗಿರುತ್ತವೆ ಮತ್ತು ವಾರ್ಷಿಕ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ.

ನೆಫ್ಟ್ ಮತ್ತು ಆರ್‌ಟಿಜಿಎಸ್‌ನಂತಹ ಇಲೆಕ್ಟ್ರಾನಿಕ ವಿಧಾನಗಳ ಮೂಲಕ ಹಣ ರವಾನೆ/ಸ್ವೀಕೃತಿಯು ಉಚಿತವಾಗಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಚೆಕ್‌ಗಳ ಠೇವಣಿ ಮತ್ತು ನಗದೀಕರಣಕ್ಕೆ ಶುಲ್ಕ ವಿಧಿಸಲಾಗುವುದಿಲ್ಲ. ನಿಷ್ಕ್ರಿಯ ಖಾತೆಗಳನ್ನು ಕ್ರಿಯಾಶೀಲಗೊಳಿಸಲೂ ಶುಲ್ಕವನ್ನು ತೆರಬೇಕಿಲ್ಲ. ಖಾತೆಯನ್ನು ಮುಚ್ಚುವಾಗಲೂ ಶುಲ್ಕವನ್ನು ವಿಧಿಸಲಾಗುವುದಿಲ್ಲ.

ಈ ಖಾತೆಯ ಮುಖ್ಯ ಷರತ್ತೆಂದರೆ ಗ್ರಾಹಕ ತಿಂಗಳಿಗೆ ನಾಲ್ಕಕ್ಕಿಂತ ಹೆಚ್ಚು ಸಲ ಹಣವನ್ನು ಹಿಂಪಡೆಯುವಂತಿಲ್ಲ.ಬ್ಯಾಂಕಿನ ಸ್ವಂತ ಎಟಿಎಂ,ಇತರ ಬ್ಯಾಂಕುಗಳ ಎಟಿಎಂನಿಂದ ಹಣ ಹಿಂತೆಗೆತ,ಆರ್‌ಟಿಜಿಎಸ್/ನೆಫ್ಟ್/ಕ್ಲಿಯರಿಂಗ್/ಶಾಖೆಯಲ್ಲಿ ಹಣ ಹಿಂದೆಗೆದುಕೊಳ್ಳುವಿಕೆ/ವರ್ಗಾವಣೆ/ಇಂಟರ್‌ನೆಟ್ ಡೆಬಿಟ್/ಸ್ಟಾಂಡಿಂಗ್ ಇನ್‌ಸ್ಟ್ರಕ್ಷನ್/ಇಎಂಐ ಇತ್ಯಾದಿಗಳು ಸೇರಿದಂತೆ ಗ್ರಾಹಕ ಕೇವಲ ನಾಲ್ಕು ಬಾರಿ ಮಾತ್ರ ತನ್ನ ಖಾತೆಯಲ್ಲಿ ಖರ್ಚು ಹಾಕಬಹುದಾಗಿದೆ.

ತನ್ನ ಬಿಎಸ್‌ಬಿಡಿ ಗ್ರಾಹಕರು ಸೇಫ್ ಡಿಪಾಜಿಟ್ ಲಾಕರ್ ಮತ್ತು ಸೂಪರ್ ಸೇವರ್ ಸೌಲಭ್ಯಗಳನ್ನೂ ಪಡೆಯಬಹುದಾಗಿದೆ ಎಂದು ಎಚ್‌ಡಿಎಫ್‌ಸಿ ವೆಬ್‌ಸೈಟ್ ತಿಳಿಸಿದೆ.

ಈ ಗ್ರಾಹಕರಿಗೆ ಉಚಿತ ಪಾಸ್‌ಬುಕ್‌ಗಳೂ ದೊರೆಯುತ್ತವೆ.

ಹೀಗಾಗಿ ಬ್ಯಾಂಕಿನಿಂದ ಆಗಾಗ್ಗೆ ಹಣ ತೆಗೆಯುವ ಅಗತ್ಯವಿಲ್ಲದವರು ಈ ಖಾತೆಯನ್ನು ಮಾಡಿಕೊಂಡರೆ ಮಿನಿಮಮ್ ಅಕೌಂಟ್ ಬ್ಯಾಲನ್ಸ್ ಕಾಟದಿಂದ ಪಾರಾಗಬಹುದು ಮತ್ತು ದಂಡದ ಹಣವನ್ನು ಉಳಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News