ಹರೇಕಳ: ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಉಚಿತ ಪುಸ್ತಕ ವಿತರಣೆ
ಕೊಣಾಜೆ, ಮೇ 23: ಇಂದಿನ ಆಧುನಿಕ ಕಾಲಘಟ್ಟದಲ್ಲಿ ಶಿಕ್ಷಣದಿಂದಲೇ ಸುಖ, ಸಂತೃಪ್ತ ಜೀವನ ಸಾಧ್ಯ, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕಿದೆ. ಇತರ ಎಲ್ಲಾ ದಾನಕ್ಕಿಂತಲೂ ವಿದ್ಯಾದಾನ ಮೌಲ್ಯಯುತವಾಗಿದ್ದು, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದು ಶಿಕ್ಷಣ ಪಡೆಯಲಾಗದವರಿಗೆ ವಿದ್ಯಾದಾನ ನೀಡುವುದು ಮುಖ್ಯ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್ ಅಭಿಪ್ರಾಯಪಟ್ಟರು.
ಹರೇಕಳ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಹರೇಕಳದಲ್ಲಿ ಬಡ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಮಾತನಾಡಿ, ಶಿಕ್ಷಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ, ಈ ನಡುವೆಯೂ ಎಸ್ಕೆಎಸ್ಸೆಸ್ಸೆಫ್ ಶಿಕ್ಷಣಕ್ಕಾಗಿ ತನ್ನ ಕೊಡುಗೆಯನ್ನು ನೀಡುತ್ತಾ ಬಂದಿರುವುದು ಶ್ಲಾಘನೀಯ ಎಂದರು.
ದೇರಲಕಟ್ಟೆ ಜುಮಾ ಮಸೀದಿಯ ಖತೀಬ್ ಅಬ್ದುಲ್ ಮಜೀದ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು. ಅಕ್ಷರ ಸಂತ ಹರೇಕಳ ಹಾಜಬ್ಬ ಶುಭ ಹಾರೈಸಿದರು. ದೇರಿಕಟ್ಟೆ ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ, ಮಾಜಿ ಅಧ್ಯಕ್ಷ ಮುಹಮ್ಮದ್, ಹುಸೈನ್ ಬೈತಾರ್, ಹೈದರ್ ಹರೇಕಳ, ರಝಾಕ್, ಇಸ್ಮಾಯಿಲ್, ಮುಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಘಟಕ ಅಬ್ದುಲ್ ರಝಾಕ್ ಹರೇಕಳ ಸ್ವಾಗತಿಸಿದರು.