ಎ.ಜೆ. ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಗೆ ಎನ್‌ಎಎಸಿ ತಂಡ ಭೇಟಿ
ಮಂಗಳೂರು, ಮೇ 23: ಆಡಳಿತ ವ್ಯವಹಾರ ವಿದ್ಯಾ ಕ್ಷೇತ್ರದಲ್ಲಿ ಖ್ಯಾತಿ ಪಡೆದಿರುವ ಮಂಗಳೂರಿನ ಎ.ಜೆ.ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಗೆ ರಾಷ್ಟ್ರೀಯ ಮೌಲ್ಯಾಂಕನಾ ಹಾಗೂ ಮಾನ್ಯತಾ ಸಂಸ್ಥೆಯ (ಎನ್‌ಎಎಸಿ) ತಂಡವು ಇತ್ತೀಚೆಗೆ ಭೇಟಿ ನೀಡಿ, ದ್ವಿತೀಯ ಆವರ್ತನೆಗಾಗಿ ವೌಲ್ಯಾಂಕನಾ ವಿಧಿ ವಿಧಾನವನ್ನು ನಡೆಸಿತು.
ಗುಜರಾತ್‌ನ ಸರ್ದಾರ್ ಪಟೇಲ್ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ.ಶಿರಿಶ್ ಆರ್.ಕುಲಕರ್ಣಿ, ಹರಿಯಾಣ ಸ್ಕೂಲ್ ಆಫ್ ಬ್ಯುಸಿನೆಸ್‌ನ ಡೀನ್ ಪ್ರೊ.ಉಷಾ ಆರೋರಾ, ಹೈದರಾಬಾದ್ ಉಸ್ಮಾನಿಯಾ ವಿವಿಯ ವಾಣಿಜ್ಯ ಮತ್ತು ಆಡಳಿತ ವ್ಯವಹಾರದ ವಿಶ್ವವಿದ್ಯಾನಿಲಯ ಕಾಲೇಜು ಪ್ರಾಂಶುಪಾಲ ಡಾ. ವೆದುಲ್ಲಾ ಶೇಖರ್ ಇವರನ್ನೊಳಗೊಂಡ ತಂಡವು ಸಂಸ್ಥೆಯ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಪ್ರಾಧ್ಯಾಪಕ ವರ್ಗ ಹಾಗೂ ಇತರ ಮೂಲ ಸೌಲಭ್ಯಗಳ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿತು. ಅಲ್ಲದೆ, ಸಂಸ್ಥೆಯಲ್ಲಿ ಅಭಿವೃದ್ಧಿ ಪಡಿಸಿದ ಸಂಶೋಧನಾ ಕೇಂದ್ರ (ರೀಸರ್ಚ್ ಸಂಟರ್) ಹಾಗೂ ಅಲ್ಲಿ ಕೊಡಮಾಡಿರುವ ಸೌಲಭ್ಯಗಳ ಬಗ್ಗೆ ತೃಪ್ತಿ ಪ್ರಕಟಿಸಿತು.
ಸಂಸ್ಥೆಯು ಹಮ್ಮಿಕೊಂಡಿರುವ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಕುರಿತು ಪ್ರಶಂಸಿಸಿದ ತಂಡವು, ಇನ್ನಿತರ ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸುವಂತೆಯೂ ಸೂಚಿಸಿತು. ಸಂಸ್ಥೆಯು ಕೈಗೊಂಡ ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಾ ಕಾರ್ಯಕ್ರಮಗಳು ಹಾಗೂ ವಿದ್ಯಾರ್ಥಿಗಳ ಪದವಿ ಪರೀಕ್ಷಾ ಫಲಿತಾಂಶಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿದ ತಂಡವು, ಆಡಳಿತ ವರ್ಗದ ದೂರದರ್ಶಿತ್ವದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿತು. ಆಡಳಿತ ಮಂಡಳಿಯ ಭಾಗವಹಿಸುವಿಕೆ, ಶಿಕ್ಷಕ ವೃಂದದ ಬದ್ಧತೆ ಮತ್ತು ವಿದ್ಯಾರ್ಥಿಗಳ ಅತ್ಯುತ್ತಮ ಮಟ್ಟದ ಶಿಸ್ತಿನ ಬಗ್ಗೆ ಪ್ರಶಂಸಿಸಿದರು. ಎರಡನೆ ದಿನ ನಡೆಸಿದ ಕಡತ ಪರಿಶೀಲನಾ ಕಾರ್ಯಕ್ರಮದ ನಂತರದ ನಿರ್ಗಮನಾ ಸಭೆಯಲ್ಲಿ ನ್ಯಾಕ್ ತಂಡವು ಸಂಸ್ಥೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ ಹಾಗೂ ನಿರ್ದೇಶಕ ಟಿ. ಜಯಪ್ರಕಾಶ್ ರಾವ್ ಇವರಿಗೆ ತನ್ನ ಪರಿಶೀಲನಾ ವರದಿಯನ್ನು ಹಸ್ತಾಂತರಿಸಿತು.