'ನಿಫಾ ವೈರಸ್' ಆತಂಕ ಬೇಡ : ಶಾಸಕ ವೇದವ್ಯಾಸ್ ಕಾಮತ್
ಮಂಗಳೂರು, ಮೇ 23: ನಿಫಾ ವೈರಸ್‍ನ ಯಾವುದೇ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯಾಗಲೀ ಅಥವಾ ಮಂಗಳೂರು ನಗರದಲ್ಲಾಗಲೀ ಪತ್ತೆಯಾಗಿಲ್ಲ. ಮಂಗಳೂರು ನಗರಕ್ಕೆ ಹೊರ ರಾಜ್ಯಗಳಿಂದ ಬರುವ ರೋಗಿಗಳ ಬಗ್ಗೆ ತೀವ್ರ ನಿಗಾ ಇಡುವ ವ್ಯವಸ್ಥೆ ಕಲ್ಪಿಸಿರುವ ಹಿನ್ನೆಲೆಯಲ್ಲಿ ಇಲ್ಲಿನ ಜನತೆ ನಿಫಾ ವೈರಸ್ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಮಂಗಳೂರು ನಗರ ದಕ್ಷಿಣದ ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ನಿಫಾ ವೈರಸ್ ಸ್ಥಿತಿಗತಿಯ ಕುರಿತು ಮಾನ್ಯ ಜಿಲ್ಲಾಧಿಕಾರಿಗಳಾದ ಸಸಿಕಾಂತ್ ಸೆಂಥಿಲ್ ಹಾಗೂ ಜಿಲ್ಲಾ ವೈದ್ಯಾಧಿಕಾರಿ ಡಾ. ರಾಜೇಶ್ವರಿ ದೇವಿ ಅವರೊಂದಿಗೆ ನಾನು ಚರ್ಚಿಸಿದ್ದು, ಜಿಲ್ಲೆಯಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಹೊರ ಪ್ರದೇಶದಿಂದ ವೆನ್ಲಾಕ್ ಗೆ ಬರುವ ರೋಗಿಗಳ ಬಗ್ಗೆ ತೀವ್ರ ನಿಗಾ ಇಡಲಾಗುತ್ತಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ನಿಫಾ ಪ್ರಕರಣ ಪತ್ತೆಗಾಗಿ ವಿಶೇಷ ಘಟಕ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಿಂದ ನಿಫಾದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರುವ ಸುದ್ದಿಗಳಿಂದ ಮಂಗಳೂರಿನ ನಾಗರಿಕರು ಆತಂಕ ಪಡುವ ಅಗತ್ಯ ಇಲ್ಲ ಎಂದು ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ನಿಫಾ ವೈರಸ್ ಹರಡುವ ಕುರಿತು ಮುಂಜಾಗ್ರತ ಕ್ರಮಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಜತೆ ಮಾತುಕತೆ ನಡೆಸಿದ್ದು, ಅವರು ಕೇಂದ್ರ ಆರೋಗ್ಯ ಇಲಾಖೆಯ ಸಂಪರ್ಕದಲ್ಲಿದ್ದಾರೆ. ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಆರೋಗ್ಯ ಇಲಾಖೆ ಸನ್ನದ್ಧವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯ ಆರೋಗ್ಯ ಇಲಾಖೆಯ ಮೂಲಕ ಸೂಕ್ತ ಕ್ರಮಕೈಗೊಳ್ಳಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.