ನೆರೆ, ಭೂಕುಸಿತದಿಂದ ಎರಡು ಲಕ್ಷ ರೊಹಿಂಗ್ಯಾ ಸಂತ್ರಸ್ತರು ಅಪಾಯದಲ್ಲಿ: ವಿಶ್ವಸಂಸ್ಥೆ

Update: 2018-05-23 15:11 GMT

ಲಂಡನ್, ಮೇ 23: ಮಾನ್ಸೂನ್ ತಿಂಗಳಲ್ಲಿ ಸಂಭವಿಸುವ ನೆರೆ ಹಾವಳಿ ಮತ್ತು ಭೂಕುಸಿತದಿಂದಾಗಿ ಬಾಂಗ್ಲಾದೇಶದ ಕಾಕ್ಸ್ ಬಝಾರ್‌ನಲ್ಲಿರುವ ಒಂದೂವರೆಯಿಂದ ಎರಡು ಲಕ್ಷದಷ್ಟು ರೊಹಿಂಗ್ಯಾ ನಿರಾಶ್ರಿತರು ಅಪಾಯದಲ್ಲಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಈ ತಿಂಗಳ ಆರಂಭದಲ್ಲಿ ಮಾನ್ಸೂನ್ ತಿಂಗಳ ಪ್ರಾರಂಭದಲ್ಲಿ ಉಂಟಾದ ಮಳೆ ಮತ್ತು ಭೂಕುಸಿತಕ್ಕೆ ಏಳು ಸಾವಿರಕ್ಕೂ ಅಧಿಕ ರೊಹಿಂಗ್ಯಾ ನಿರಾಶ್ರಿತರು ಬಾಧಿತರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರ ವಕ್ತಾರ ಸ್ಟಿಫನಿ ಡುಜರಿಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಾನ್ಸೂನ್‌ನಲ್ಲಿ ಕಾಕ್ಸ್ ಬಝಾರ್‌ನಲ್ಲಿ ಸಾಮಾನ್ಯವಾಗಿ 2.5 ಮೀಟರ್‌ನಷ್ಟು ಮಳೆಯಾಗುತ್ತದೆ. ಇದರಿಂದಾಗಿ ನೆರೆ ಹಾವಳಿ ಉಂಟಾಗುತ್ತದೆ. ಹಾಗಾಗಿ ಈ ಪ್ರದೇಶದಲ್ಲಿರುವ ಸುಮಾರು ಎರಡು ಲಕ್ಷ ನಿರಾಶ್ರಿತರು ಮತ್ತು 883 ಸಮುದಾಯ ಸೌಕರ್ಯಗಳು ಅಪಾಯಕ್ಕೆ ಸಿಲುಕಿವೆ. ಅದರಲ್ಲೂ 25,000 ನಿರಾಶ್ರಿತರು ಗಂಭೀರ ಅಪಾಯಕ್ಕೆ ಸಿಲುಕಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮಳೆಯ ಪರಿಣಾಮ ರೊಹಿಂಗ್ಯಾ ನಿರಾಶ್ರಿತರನ್ನು ಬಾಧಿಸದಿರಲಿ ಎಂಬ ಉದ್ದೇಶದಿಂದ ವಿಶ್ವಸಂಸ್ಥೆಯು ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಡುಜರಿಕ್ ತಿಳಿಸಿದ್ದಾರೆ. ಪ್ರತಿ ವರ್ಷ ಮಾನ್ಸೂನ್ ಸಮಯದಲ್ಲಿ ಅಪಾಯವನ್ನು ಎದುರಿಸುವ ಬಾಂಗ್ಲಾದೇಶವು ಇದರಿಂದಾಗಿ ಈ ಸಂಕಷ್ಟದಿಂದ ಪಾರಾಗಲು ಒಂದಷ್ಟು ವ್ಯವಸ್ಥೆಗಳನ್ನೂ ಮಾಡಿಕೊಂಡಿದೆ. ಆದರೆ ನಿರಾಶ್ರಿತರು ತಂಗಿರುವ ಶಿಬಿರಗಳಿರುವ ಪ್ರದೇಶ ಮತ್ತು ಜನಸಂಖ್ಯೆ ಈ ಪರಿಹಾರ ಕಾರ್ಯಗಳಿಗೆ ತಡೆಯೊಡ್ಡುವಂತಿದೆ. ಅತ್ಯಂತ ಗಂಭೀರ ಅಪಾಯದಲ್ಲಿರುವ ನಿರಾಶ್ರಿತರನ್ನು ರಕ್ಷಿಸುವ ಮತ್ತು ಅವರಿಗೆ ಬೆಂಬಲ ನೀಡುವ ಕೆಲಸವನ್ನು ಅಂತರ್‌ರಾಷ್ಟ್ರೀಯ ಮಾನವೀಯ ಸಮುದಾಯ ಮಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News