ಎಲಿಮಿನೇಟರ್: ರಾಜಸ್ಥಾನ್ ರಾಯಲ್ಸ್ ಗೆಲುವಿಗೆ 170 ರನ್ ಸವಾಲು

Update: 2018-05-23 15:23 GMT

ಕೋಲ್ಕತಾ, ಮೇ 23: ನಾಯಕ ದಿನೇಶ್ ಕಾರ್ತಿಕ್(52 ರನ್, 38 ಎಸೆತ) ಹಾಗೂ ಆಲ್‌ರೌಂಡರ್ ರಸ್ಸಲ್(ಔಟಾಗದೆ 49,25 ಎಸೆತ) ಸಾಹಸದ ನೆರವಿನಿಂದ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ತಂಡ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಐಪಿಎಲ್‌ನ ಎಲಿಮಿನೇಟರ್ ಪಂದ್ಯದ ಗೆಲುವಿಗೆ 170 ರನ್ ಸವಾಲು ವಿಧಿಸಿದೆ.

ಕೋಲ್ಕತಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 169 ರನ್ ಗಳಿಸಿದೆ.

ಇಲ್ಲಿನ ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ರಾಜಸ್ಥಾನ ತಂಡದ ನಾಯಕ ಅಜಿಂಕ್ಯ ರಹಾನೆ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಇನಿಂಗ್ಸ್‌ನ 2ನೇ ಎಸೆತದಲ್ಲಿ ಸುನೀಲ್ ನರೇನ್(4) ವಿಕೆಟ್‌ನ್ನು ಕಳೆದುಕೊಂಡ ಕೋಲ್ಕತಾ ಕಳಪೆ ಆರಂಭ ಪಡೆಯಿತು. ಕೃಷ್ಣಪ್ಪ ಗೌತಮ್ (2-15) ನರೇನ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ 7 ಎಸೆತಗಳನ್ನು ಎದುರಿಸಿ ಕೇವಲ 3 ರನ್ ಗಳಿಸಿ ಗೌತಮ್‌ಗೆ ರಿಟರ್ನ್ ಕ್ಯಾಚ್ ನೀಡಿದರು. ನಿತಿಶ್ ರಾಣಾ(3)ಕೂಡ ಬೇಗನೇ ಔಟಾದರು. ಆಗ ಕೆಕೆಆರ್ ಸ್ಕೋರ್ 3ಕ್ಕೆ 24 ರನ್.

ಕ್ರಿಸ್ ಲಿನ್(18) ಅವರೊಂದಿಗೆ ಕೈಜೋಡಿಸಿದ ನಾಯಕ ಕಾರ್ತಿಕ್ 4ನೇ ವಿಕೆಟ್‌ಗೆ 27 ರನ್ ಜೊತೆಯಾಟ ನಡೆಸಿದರು. ಆದರೆ ಈ ಜೋಡಿಯನ್ನು ಶ್ರೇಯಸ್ ಗೋಪಾಲ್ ಬೇರ್ಪಡಿಸಿದರು.

ಶುಭ್‌ಮನ್ ಗಿಲ್(28, 17 ಎಸೆತ, 3 ಬೌಂಡರಿ, 1 ಸಿಕ್ಸರ್) ಹಾಗೂ ಕಾರ್ತಿಕ್ 5ನೇ ವಿಕೆಟ್‌ಗೆ 55 ರನ್ ಜೊತೆಯಾಟ ನಡೆಸಿ ತಂಡದ ಸ್ಕೋರನ್ನು 100ರ ಗಡಿ ದಾಟಿಸಿದರು. 28 ರನ್ ಗಳಿಸಿದ ಗಿಲ್ ಅವರು ಆರ್ಚರ್‌ಗೆ ವಿಕೆಟ್ ಒಪ್ಪಿಸಿದರು.

38 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಒಳಗೊಂಡ 52 ರನ್ ಗಳಿಸಿದ ಕಾರ್ತಿಕ್ 17.1ನೇ ಓವರ್‌ನಲ್ಲಿ ಲಾಫ್‌ಲಿನ್‌ಗೆ ವಿಕೆಟ್ ಒಪ್ಪಿಸಿದರು.

ಔಟಾಗದೆ 49 ರನ್(25 ಎಸೆತ, 3 ಬೌಂಡರಿ, 5 ಸಿಕ್ಸರ್)ಗಳಿಸಿದ ರಸ್ಸಲ್ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಲು ನೆರವಾದರು.

ಜೋಸ್ ಬಟ್ಲರ್ ಹಾಗೂ ಬೆನ್ ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಎಲಿಮಿನೇಟರ್ ಪಂದ್ಯ ಆಡುತ್ತಿರುವ ರಾಜಸ್ಥಾನ ತಂಡ ಈಡನ್‌ಗಾರ್ಡನ್ಸ್‌ನಲ್ಲಿ ಕಳಪೆ ದಾಖಲೆ ಹೊಂದಿದೆ. ಇಲ್ಲಿ ಆಡಿರುವ 7 ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಮಾತ್ರ ಜಯ ಸಾಧಿಸಿದೆ.

ಸಂಕ್ಷಿಪ್ತ ಸ್ಕೋರ್

ಕೋಲ್ಕತಾ ನೈಟ್ ರೈಡರ್ಸ್: 20 ಓವರ್‌ಗಳಲ್ಲಿ 169/7

(ದಿನೇಶ್ ಕಾರ್ತಿಕ್ 52, ರಸ್ಸಲ್ ಔಟಾಗದೆ 49, ಶುಭಮನ್ ಗಿಲ್ 28, ಕೆ.ಗೌತಮ್ 2-15, ಆರ್ಚರ್ 2-33, ಲಾಫ್‌ಲಿನ್ 2-35)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News