ಪುತ್ತೂರು : ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Update: 2018-05-23 15:40 GMT

ಪುತ್ತೂರು, ಮೇ 23: ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ  ಪ್ರಮುಖ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಮಂಗಳೂರು ತಾಲ್ಲೂಕಿನ ಮಾಡೂರು ಕೋಟೆ ನಿವಾಸಿ ಫಿರೂಜ್ ಖಾನ್ ಬಂಧಿತ ಆರೋಪಿ. ಕಳೆದ 2007ರ ಅಕ್ಟೋಬರ್ 9ರಂದು ಪಡೀಲು ಕಡೆಯಿಂದ ಪುತ್ತೂರು ಪೇಟೆಗೆ ಬರುತ್ತಿದ್ದ ನಂಬ್ರ ಪ್ಲೇಟ್ ಇಲ್ಲದ ಮಾರುತಿ ಕಾರೊಂದನ್ನು ಪುತ್ತೂರು ನಗರ ಪೊಲೀಸರು ತಡೆದು ತಪಾಸಣೆಗೊಳಪಡಿಸಿದ ವೇಳೆ ಅಕ್ರಮ ಮದ್ಯ ಸಾಗಾಟ ಪ್ರಕರಣ ಪತ್ತೆಯಾಗಿತ್ತು. ಕಾರಿನಲ್ಲಿದ್ದ ರೂ.60 ಸಾವಿರ ಮೌಲ್ಯದ ಮದ್ಯ ಮತ್ತು ಮಾರುತಿ ಕಾರನ್ನು ವಶಪಡಿಸಿಕೊಂಡು ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಕಾರಿನಲ್ಲಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ವೇಳೆ ಲಭಿಸಿದ ಮಾಹಿತಿಯಂತೆ ಶರಾಬು ಸಾಗಾಟ ಮಾಡಲು ಕಾರು ಒದಗಿಸಿದ ವ್ಯಕ್ತಿಯನ್ನು ನಾಲ್ಕನೇ ಆರೋಪಿಯಾಗಿ ಹೆಸರಿಸಿದ್ದರು.

ಅಕ್ರಮ ಮದ್ಯ ಸಾಗಾಟದ ವೇಳೆ ಬಂಧನಕ್ಕೊಳಗಾಗಿದ್ದ ಆರೋಪಿ ಖಾನ್ ಯಾನೆ ಫಿರೂಜ್ ಖಾನ್ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಬಳಿಕ ನ್ಯಾಯಾಲಯ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆತ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡ ಹಿನ್ನಲೆಯಲ್ಲಿ ಆತನ ಬಂಧನ ಸಾಧ್ಯವಾಗಿರಲಿಲ್ಲ. ಕಳೆದ ರವಿವಾರ ಆರೋಪಿ ಊರಿಗೆ ಬರಲು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅಲ್ಲಿನ ಪೊಲೀಸರ ಸಹಕಾರದಲ್ಲಿ ಪುತ್ತೂರು ನಗರ ಪೊಲೀಸರು ಅಲ್ಲಿಗೆ ತೆರಳಿ ಆತನನ್ನು ಬಂಧಿಸಿ ಪುತ್ತೂರಿಗೆ ಕರೆತಂದು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ಮೇ 28ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News