ಸಾಂಕ್ರಾಮಿಕ ರೋಗ ತಡೆಗೆ ಸೂಕ್ತ ಕ್ರಮ-ಎ.ಸಿ. ಕೃಷ್ಣಮೂರ್ತಿ
ಪುತ್ತೂರು, ಮೇ 23: ಮಳೆಗಾಲದ ಸಂದರ್ಭದಲ್ಲಿ ಹಲವಾರು ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಿದ್ದು, ಇದರಿಂದ ಉಂಟಾಗುವ ಅಪಾಯವನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಮುಂಜಾಗರೂಕತಾ ಕ್ರಮ ಕೈಗೊಳ್ಳಲಾಗುವುದು ಎಂದು ಪುತ್ತೂರು ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಹೇಳಿದರು.
ಅವರು ಬುಧವಾರ ತಾಲೂಕು ಮಟ್ಟದ ನಾನಾ ಇಲಾಖೆಗಳ ಅಧಿಕಾರಿಗಳೊಂದಿಗೆ ಮುಂಗಾರು ಮುನ್ನೆಚ್ಚರಿಕೆ ಕುರಿತ ಸಮಾಲೋಚನಾ ಸಭೆ ನಡೆಸಿದರು. ಸಾಮಾನ್ಯವಾಗಿ ಮಳೆಗಾಲದಲ್ಲಿ ಬರುವ ಸಾಂಕ್ರಾಮಿಕ ರೋಗಗಳ ಬಗ್ಗೆ ಈಗಾಗಲೇ ನಿಗಾ ವಹಿಸಲಾಗಿದೆ. ಮಲೇರಿಯಾ, ಡೆಂಗೆ ಜ್ವರ, ಇಲಿ ಜ್ವರ ಮುಂತಾದ ರೋಗಗಳ ಬಗ್ಗೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ. ಎಲ್ಲ ಬಗೆಯ ರೋಗಗಳಿಗೆ ಬೇಕಾದ ಔಷಧಗಳು ಸಿದ್ಧವಾಗಿವೆ. ಇದರಲ್ಲಿ ಯಾವುದೇ ಕೊರತೆಯಿಲ್ಲ ಎಂದವರು ನುಡಿದರು.
ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಆಯಾ ಗ್ರಾಮಗಳಲ್ಲಿ ಆರೋಗ್ಯ ಜಾಗೃತಿ ನಡೆಸಬೇಕು. ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆ ಭೇಟಿ ಕಾರ್ಯಕ್ರಮ ನಡೆಸಬೇಕು. ಆರೋಗ್ಯ ಜಾಗೃತಿ ಕರಪತ್ರ ಹಂಚಬೇಕು. ನಿಂತ ನೀರಿನ ಅಪಾಯದ ಬಗ್ಗೆ ಮುನ್ನೆಚ್ಚರಿಕೆ ನೀಡಬೇಕು. ನೀರಿನಲ್ಲಿ ಲಾರ್ವಾಗಳ ಉತ್ಪತ್ತಿಯಾಗದಂತೆ, ಆದ ತಕ್ಷಣ ಅವುಗಳ ನಾಶ ಮಾಡುವ ಬಗ್ಗೆ, ಅಗತ್ಯ ಬಿದ್ದಲ್ಲಿ ಫಾಗಿಂಗ್ ನಡೆಸುವ ಬಗ್ಗೆ ಕಟ್ಟೆಚ್ಚರ ಸ್ಥಿತಿಯಲ್ಲಿ ಇರಬೇಕು ಎಂದವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕು ಮಟ್ಟದ ಎಲ್ಲ ಗ್ರಾಮ ಪಂಚಾಯಿತಿಗಳ ಪಿಡಿಒಗಳ ಸಭೆ ಕರೆದು ಮುಂಗಾರು ಮುನ್ನೆಚ್ಚರಿಕಾ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಸೂಚನೆ ನೀಡಿ. ಅಗತ್ಯ ಹಣವನ್ನು ಗ್ರಾಪಂ ನಿಧಿಯಿಂದ ಬಳಲಸು ನಿರ್ದೇಶನ ನೀಡಿ ಎಂದು ತಾಪಂ ಕಾರ್ಯನಿರ್ವಹಣಾ ಅಧಿಕಾರಿ ಜಗದೀಶ್ ಎಸ್. ಅವರಿಗೆ ಎಚ್.ಕೆ. ಕೃಷ್ಣಮೂರ್ತಿ ಸೂಚನೆ ನೀಡಿದರು. ಅನಧಿಕೃತ ಕಲ್ಲುಕೋರೆಗಳ ಬಗ್ಗೆ ವರದಿ ತರಿಸಿಕೊಳ್ಳಿ. ಅಧಿಕೃತ ಕೋರೆಗಳಿದ್ದರೂ ಅವರುಗಳು ಮಳೆಗಾಲಕ್ಕೆ ಮುನ್ನ ಕೋರೆಗಳನ್ನು ಮುಚ್ಚಬೇಕು ಇಲ್ಲವೇ ಬೇಲಿ ಹಾಕುವಂತೆ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಎ.ಸಿ. ಸೂಚನೆ ನೀಡಿದರು.
ಉಪ್ಪಿನಂಗಡಿಯಲ್ಲಿ ನೆರೆ ಬಂದು ತಗ್ಗು ಪ್ರದೇಶಗಳು ಮುಳುಗಡೆಯಾಗುವ ಸಾಧ್ಯತೆ ಇರುವ ಕಾರಣ ಅಲ್ಲಿ ಮುಂಜಾಗರೂಕತಾ ಕ್ರಮ ಕೈಗೊಳ್ಳಲು ಕಂದಾಯ ಇಲಾಖೆಗೆ ಸೂಚನೆ ನೀಡಲಾಯಿತು. ಉಪ್ಪಿನಂಗಡಿಯಲ್ಲೇ ಒಂದು ನೆರೆ ಮುಂಜಾಗರೂಕತಾ ಸಭೆ ನಡೆಸಲು ತಿಳಿಸಲಾಯಿತು. ಬೆಟ್ಟಂಪಾಡಿ ಸಮೀಪದ ಚೆಲ್ಯಡ್ಕ ಹಾಗೂ ಕಡಬದ ಹೊಸಮಠದಲ್ಲಿ ಮುಳುಗು ಸೇತುವೆಯಿಂದ ಆಹಬಹುದಾದ ಸಮಸ್ಯೆಗಳ ಕಡೆಗೆ ಮುನ್ನೆಚ್ಚರಿಕೆ ವಹಿಸಬೇಕು. ಹೊಸಮಠದಲ್ಲಿ ಹೆಚ್ಚಿನ ಜಾಗೃತೆ ವಹಿಸಬೇಕು. ಅಲ್ಲಿ ಒಂದು ಶೆಡ್ ನಿರ್ಮಿಸಿ ಅಗತ್ಯ ವಸ್ತುಗಳನ್ನು ಇಟ್ಟುಕೊಳ್ಳಬೇಕೆಂದು ತಿಳಿಸಿದರು.
ಮೆಸ್ಕಾಂ ಇಲಾಖೆಯವರು ಎಲ್ಲ ರೀತಿಯ ಮುಂಜಾಗರೂಕತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ ಎ.ಸಿ.ಯವರು ವಿದ್ಯುತ್ ಲೈನ್‌ಗೆ ಅಪಾಯ ತಂದೊಡ್ಡಬಹುದಾದ ಮರಗಳನ್ನು ಪಟ್ಟಿ ಮಾಡಿ ಅರಣ್ಯ ಇಲಾಖೆಗೆ ನೀಡುವಂತೆ ತಿಳಿಸಿದರು. ಅರಣ್ಯ ಇಲಾಖೆ ಮೆಸ್ಕಾಂ ಲೈನ್ ಮಾತ್ರವಲ್ಲದೆ ರಸ್ತೆ ಪಕ್ಕದ ಅಪಾಯಕಾರಿ ಮರಗಳನ್ನು ಕೂಡ ತೆರವು ಮಾಡಬೇಕು. ಒಂದು ಮರ ಕಡಿದ ಜಾಗದಲ್ಲಿ ಎರಡು ಸಸಿ ನೆಡಬೇಕು ಎಂದು ಹೇಳಿದರು. ರಸ್ತಗೆ ಮರ ಬಿದ್ದ ಸಂದರ್ಭದಲ್ಲಿ ಅದನ್ನು ತೆರವು ಮಾಡುವ ವಿಷಯದಲ್ಲಿ ಅರಣ್ಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಜಟಾಪಟಿ ಮಾಡಬಾರದು. ಮರ ಅರಣ್ಯ ಇಲಾಖೆಯದ್ದು, ರಸ್ತೆ ಲೋಕೋಪಯೋಗಿಯದ್ದು ಎಂಬ ವಾದ ವಿವಾದ ಬೇಡ. ಜನರಿಗೆ ಸಮಸ್ಯೆಯಾಗದಂತೆ ಎರಡೂ ಇಲಾಖೆಗಳು ತಕ್ಷಣ ಕಾರ್ಯಾಚರಣೆ ನಡೆಸಬೇಕು ಎಂದು ಎ.ಸಿ. ತಿಳಿಸಿದರು.
ಪುತ್ತೂರು ನಗರ ಪ್ರದೇಶದ ಚರಂಡಿಗಳ ಹೂಳೆತ್ತಿ ಕೃತಕ ನೆರೆ ಬಾರದಂತೆ ಕ್ರಮ ಕೈಗೊಳ್ಳಲು ಪೌರಾಯುಕ್ತರಿಗೆ ಆದೇಶ ನೀಡಿದ ಎ.ಸಿ.ಯವರು, ನಗರದ ರಸ್ತೆ ಅಗಲೀಕರಣಕ್ಕೆ ಬೇಕಾಗಿ ದರ್ಬೆಯಿಂದ ಮರೀಲ್‌ವರೆಗೆ ಕಡಿಯಬೇಕಾದ ಮರಗಳ ಬಗ್ಗೆ ಪಟ್ಟಿ ಸಲ್ಲಿಸಿ. ಒಂದು ಮರದ ಕಡಿಯುವ ಸಂದರ್ಭ ಎರಡು ಸಸಿ ನೆಡಲು ವ್ಯವಸ್ಥೆ ಮಾಡಿಕೊಳ್ಳಿ ಎಂದು ಸೂಚಿಸಿದರು.
ಮಳೆಗಾಲದ ತುರ್ತು ಕಾರ್ಯಾಚರಣೆಗಾಗಿ ಕಂದಾಯ ಇಲಾಖೆ ವತಿಯಿಂದ ತಾಲೂಕು ಕಚೇರಿಯಲ್ಲಿ ಕಂಟ್ರೋಲ್ ರೂಮ್ ತೆರೆಯಲಾಗಿದೆ. ಅದರ ದೂರವಾಣಿ ಸಂಖ್ಯೆ - 230349 ಆಗಿರುತ್ತದೆ. ಅದೇ ರೀತಿ ಮೆಸ್ಕಾಂ ಕಸ್ಟಮರ್ ಕೇರ್ ನಂಬರ್-1912 ಆಗಿರುತ್ತದೆ ಎಂದು ಈ ಸಂದರ್ಭ ಪ್ರಕಟಿಸಲಾಯಿತು.
ತಹಶೀಲ್ದಾರ್ ಅನಂತ ಶಂಕರ್, ತಾಪಂ ಕಾರ್ಯನಿರ್ವಹಣಾ ಅಧಿಕಾರಿ ಜಗದೀಶ್ ಎಸ್., ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪುರಂದರ್, ಲೋಕೋಪಯೋಗಿ ಇಲಾಖೆ ಅಧಿಕಾರಿ ಪ್ರಮೋದ್, ಜಿಪಂ ಎಂಜಿನಿಯರಿಂಗ್ ಅಧಿಕಾರಿ ರೋಹಿದಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಲಾವಣ್ಯ, ಸಿಡಿಪಿಒ ಶಾಂತಿ ಹೆಗಡೆ, ಮೆಸ್ಕಾಂನ ರಾಮಚಂದ್ರ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಅಗ್ನಿಶಾಮಕ ದಳ, ಹೋಂ ಗಾರ್ಡ್, ಆರೋಗ್ಯ ಇಲಾಖೆ ಮುಂತಾದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.