ಸ್ಥಳಿಯರನ್ನು ಮಾನವಕವಚವಾಗಿ ಬಳಸುತ್ತಿರುವ ಭಾರತೀಯ ಸೇನೆ: ವಿಶ್ವಸಂಸ್ಥೆಯಲ್ಲಿ ಪಾಕ್ ಆರೋಪ

Update: 2018-05-23 16:05 GMT

ಲಂಡನ್, ಮೇ 23: 2017ರಲ್ಲಿ ಭಾರತೀಯ ಸೇನೆಯು ಕಾಶ್ಮೀರದ ಶ್ರೀನಗರದಲ್ಲಿ ಕಲ್ಲೆಸೆತಗಾರರಿಂದ ರಕ್ಷಣೆ ಪಡೆಯಲು ವ್ಯಕ್ತಿಯೊಬ್ಬನನ್ನು ತಮ್ಮ ವಾಹನದ ಮುಂಭಾಗಕ್ಕೆ ಕಟ್ಟಿ ಹಾಕಿದ್ದ ಪ್ರಕರಣವನ್ನು ವಿಶ್ವಸಂಸ್ಥೆಯಲ್ಲಿ ತೀವ್ರ ವಾಗಿ ಖಂಡಿಸಿರುವ ಪಾಕಿಸ್ತಾನ, ಕಾಶ್ಮೀರದಲ್ಲಿ ಕಲ್ಲೆಸೆತಗಾರರಿಂದ ಇತರ ರೀತಿಯಲ್ಲಿ ರಕ್ಷಣೆ ಪಡೆಯುವ ಬದಲು ಭಾರತೀಯ ಸೇನೆ ಸ್ಥಳೀಯ ವ್ಯಕ್ತಿಗಳನ್ನೇ ಮಾನವ ಕವಚಂತೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಪಾಕಿಸ್ತಾನದ ಶಾಶ್ವತ ಪ್ರತಿನಿಧಿ ಮಲೀಹ ಲೋಧಿ, ನಾಗರಿಕರನ್ನು ರಕ್ಷಿಸುವುದು ಸೇನೆಯ ಪ್ರಥಮ ಆದ್ಯತೆಯಾಗಬೇಕು. ಆದರೆ ಇಲ್ಲಿ ಅವರೇ ಸೇನೆಯ ಪ್ರಥಮ ಗುರಿಗಳಾಗಿದ್ದಾರೆ ಎಂದು ಆರೋಪಿಸಿದರು.

ಗುರಿಯಾಧಾರಿತ ದಾಳಿಗಳು, ಲೈಂಗಿಕ ಹಿಂಸಾಚಾರ, ಹತ್ಯೆ ಇತ್ಯಾದಿಗಳು ಆಧುನಿಕ ಜಗತ್ತಿನ ಸಶಸ್ತ್ರ ಸಂಘರ್ಷದಲ್ಲಿ ಮಾನವ ಜೀವಕ್ಕೆ ಇರುವ ಮೌಲ್ಯವನ್ನು ತೋರಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಜಿನಿವಾ ಒಪ್ಪಂದವನ್ನು ಮುರಿಯಲಾಗಿದೆ, ಮಾನವ ಜೀವನಕ್ಕೆ ಗೌರವ ಕಡಿಮೆಯಾಗಿದೆ ಮತ್ತು ಮನುಷ್ಯರನ್ನು ರಕ್ಷಣಾ ಕವಚಗಳಂತೆ ಬಳಸಲಾಗುತ್ತಿದೆ ಎಂದು ಲೋಧಿ ವಿಶ್ವಸಂಸ್ಥೆಗೆ ತಿಳಿಸಿದ್ದಾರೆ. ಇದಕ್ಕೂ ಭೀಕರವೆಂದರೆ ಇಂಥ ಹೀನಾಯ ಕೃತ್ಯ ಎಸಗುವ ಸೇನಾ ಅಧಿಕಾರಿಗಳನ್ನು ಉನ್ನತ ಗೌರವ ನೀಡಿ ಸನ್ಮಾನಿಸಲಾಗುತ್ತಿದೆ ಎಂದು ಲೋಧಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News