ಉಡುಪಿ: ಬಿಜೆಪಿಯಿಂದ ಕರಾಳ ದಿನಾಚರಣೆ

Update: 2018-05-23 16:05 GMT

ಉಡುಪಿ, ಮೇ 23: ರಾಜ್ಯದ ಜನತೆ ಬಿಜೆಪಿಗೆ ಆಡಳಿತ ನಡೆಸಲು ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ನೀಡಿದ್ದರೂ, ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜ್ಯದಲ್ಲಿ ಸರಕಾರ ರಚಿಸಲು ಮುಂದಾಗಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕರೆಕೊಟ್ಟಂತೆ ಉಡುಪಿಯಲ್ಲೂ ಕಡಿಯಾಳಿಯ ಬಿಜೆಪಿ ಕಚೇರಿ ಮುಂದೆ ಉಡುಪಿ ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ಇಂದು ಸಂಜೆ ಕರಾಳ ದಿನವನ್ನಾಚರಿಸಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ರಘುಪತಿ ಭಟ್, ರಾಜ್ಯದಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಬಿಜೆಪಿಗೆ ಜನಾದೇಶ ದೊರಕಿದ್ದರೂ, ಕಾಂಗ್ರೆಸ್ ಮತ್ತು ಜೆಡಿಎಸ್ ಬಹುಮತ ಸಿಗದಂತೆ ವ್ಯವಸ್ಥಿತವಾಗಿ ಹುನ್ನಾರ ನಡೆಸಿ, ಯಡಿಯೂರಪ್ಪ ವಿಶ್ವಾಸಮತ ಗೆಲ್ಲದಂತೆ ನೋಡಿಕೊಂಡಿದ್ದಾರೆ. ಇದರಿಂದ ಯಡಿಯೂರಪ್ಪ ಅವರು ಅಟಲ್ ಬಿಹಾರಿ ವಾಜಪೇಯಿ ರೀತಿಯಲ್ಲಿ ರಾಜೀನಾಮೆ ನೀಡಿ ಬಂದಿದ್ದಾರೆ ಎಂದರು.

ಇಂದು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕುಮಾರಸ್ವಾಮಿ ಅವರು ಹೆಚ್ಚುದಿನ ಮುಖ್ಯಮಂತ್ರಿಯಾಗಿ ಮುಂದುವರಿ ಯುವುದಿಲ್ಲ ಎಂದು ಜನಸಾಮಾನ್ಯರು ಮಾತನಾಡಿಕೊಳ್ಳುತಿದ್ದಾರೆ. ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಮ್ಮಂಥ ಶಾಸಕರಿಗೆ ಶೀಘ್ರವೇ ಮತ್ತೊಂದು ಚುನಾವಣೆ ಎದುರಾಗುವ ಭೀತಿ ಕಾಡುತ್ತಿದೆ ಎಂದು ರಘುಪತಿ ಭಟ್ ನುಡಿದರು.

ಈ ಸರಕಾರ ಪ್ರಮಾಣ ವಚನ ಸ್ವೀಕರಿಸುವ ಮೊದಲೇ ಭಿನ್ನಮತ ಆರಂಭಗೊಂಡಿದೆ. ಕಾಂಗ್ರೆಸ್‌ನಲ್ಲಿ ಹಲವು ಉಪಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿಸುವ ಸನ್ನಿವೇಶ ಎದುರಾಗಿದೆ. ಇದರಿಂದ ಕರ್ನಾಟಕದಲ್ಲಿ ರಾಜಕೀಯ ಪರಿಸ್ಥಿತಿ ಅತ್ಯಂತ ಹೀನಾಯವಾಗಿದೆ. ಇಂಥ ಸಂದರ್ಭದಲ್ಲಿ ರಾಜ್ಯದ ಹಾಗೂ ಕ್ಷೇತ್ರದ ಅಭಿವೃದ್ಧಿ ಮರೀಚಿಕೆಯಾಗುತ್ತದೆ. ಜನರ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿಲ್ಲವಾಗಿದೆ. ಕೇವಲ ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ರಾಜ್ಯದ ಜನಾದೇಶಕ್ಕೆ ಬೆಲೆ ಬರುತ್ತದೆ ಎಂದರು.

ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಈಗಾಗಲೇ ವಚನಭ್ರಷ್ಟನೆಂಬ ಹೆಸರು ಪಡೆದಿರುವ ಕುಮಾರಸ್ವಾಮಿ, ಈ ಬಾರಿ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ನಿನ್ನೆ ಹೇಳುವ ಮೂಲಕ ಅಧಿಕಾರಕ್ಕೇರುವ ಮೊದಲೇ ವಚನ ಭ್ರಷ್ಟ ಎನಿಸಿಕೊಂಡಿದ್ದಾರೆ. ವಿಶ್ವಾಸಮತ ಯಾಚನೆಯ ವೇಳೆ ಶಾಸಕರಿಗೆ ಆತ್ಮಸಾಕ್ಷಿಗನುಗುಣವಾಗಿ ಮತ ಹಾಕಲು ಅವಕಾಶ ನೀಡಲಿಲ್ಲ. ಕೇವಲ ಅಧಿಕಾರಕ್ಕಾಗಿ ಮಾತ್ರ ಇವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಈ ಸರಕಾರ ಆರು ತಿಂಗಳಿಗಿಂತ ಹೆಚ್ಚು ಬಾಳದು ಎಂದು ಜನಸಾಮಾನ್ಯರು ನಂಬಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಉಡುಪಿ ಜಿಪಂ ಅಧ್ಯಕ್ಷ ದಿನಕರಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ರಾಘವೇಂದ್ರ ಕಿಣಿ, ಗಿರೀಶ್ ಆಂಚನ್, ದಾವೂದ್ ಅಬೂಬಕ್ಕರ್, ಮಹೇಶ್ ಠಾಕೂರ್, ಹರೀಶ್ ರಾಮ್, ರವಿ ಅಮೀನ್, ಪ್ರಭಾಕರ ಪೂಜಾರಿ, ರಜನಿ ಹೆಬ್ಬಾರ್, ಮಂಜುಳಾ ಪ್ರಸಾದ್,ಜಗದೀಶ್ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News