ಮಕ್ಕಳ ಲೈಂಗಿಕ ಶೋಷಣೆ ಮುಚ್ಚಿಟ್ಟ ಪ್ರಕರಣ: ಪದವಿಗೆ ರಾಜೀನಾಮೆ ನೀಡಿದ ಆರ್ಚ್ ಬಿಷಪ್

Update: 2018-05-23 16:31 GMT

ಸಿಡ್ನಿ, ಮೇ 23: ಮಕ್ಕಳ ಲೈಂಗಿಕ ಶೋಷಣೆಯನ್ನು ಮುಚ್ಚಿಟ್ಟ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟಿರುವ ಆಸ್ಟ್ರೇಲಿಯದ ಆರ್ಚ್ ಬಿಷಪ್, ತಾನು ತನ್ನ ಅಧಿಕೃತ ಜವಾಬ್ದಾರಿಗಳಿಂದ ಹೊರಬರುತ್ತಿರುವುದಾಗಿ ಬುಧವಾರ ತಿಳಿಸಿದ್ದಾರೆ.

 67ರ ಹರೆಯದ ಅಡಿಲೇಡ್ ಆರ್ಚ್ ಬಿಷಪ್ ಫಿಲಿಪ್ ವಿಲ್ಸನ್ 1970ರ ದಶಕದಲ್ಲಿ ಕುಖ್ಯಾತ ಮಕ್ಕಳ ಲೈಂಗಿಕ ಶೋಷಕ ಪಾದ್ರಿ ಜಿಮ್ ಫಲೆಚರ್ ನ್ಯೂ ಸೌತ್ ವೇಲ್ಸ್‌ನಲ್ಲಿ ನಡೆಸಿದ್ದ ಹೀನಾಯ ಕೃತ್ಯಗಳನ್ನು ಪೊಲೀಸರಿಗೆ ತಿಳಿಸದೆ ಮುಚ್ಚಿಟ್ಟಿದ್ದರು ಎಂದು ಆರೋಪಿಸಲಾಗಿತ್ತು. ವಿಲ್ಸನ್ ತಮ್ಮ ಮೇಲಿನ ಆರೋಪವನ್ನು ನಿರಾಕರಿಸುತ್ತಾ ಬಂದಿದ್ದರೂ ನ್ಯೂಕ್ಯಾಸಲ್ ನ್ಯಾಯಾಲಯವು ಈ ವಾರ ಅವರನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿದೆ. ಈ ಅಪರಾಧಕ್ಕಾಗಿ ಕನಿಷ್ಟ ಎರಡು ವರ್ಷಗಳ ಕಾರಾಗೃಹ ಶಿಕ್ಷೆಗೊಳಪಡಲಿರುವ ವಿಲ್ಸನ್ ನ್ಯಾಯಾಲಯದ ತೀರ್ಪಿಗೆ ಗೌರವ ನೀಡುತ್ತಾ ತನ್ನೆಲ್ಲಾ ಕರ್ತವ್ಯದಿಂದ ಹೊರಬರುತ್ತಿರುವುದಾಗಿ ತಿಳಿಸಿದ್ದಾರೆ.

ವಿಲ್ಸನ್‌ಗೆ ಆಲ್ಜಿಮರ್ ಕಾಯಿಲೆಯಿದ್ದು ಅವರನ್ನು ವಿಚಾರಣೆಯಿಂದ ಮುಕ್ತಗೊಳಿಸಬೇಕು ಎಂದು ಅವರ ಪರ ವಕೀಲರು ವಾದಿಸಿದರೂ ಈ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ ವಿಲ್ಸನ್ ತಪ್ಪಿತಸ್ಥ ಎಂದು ತೀರ್ಪು ನೀಡಿದೆ. ಅವರ ಶಿಕ್ಷೆಯ ಪ್ರಮಾಣವನ್ನು ಮುಂದಿನ ದಿನಾಂಕದಲ್ಲಿ ತಿಳಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ. ಸದ್ಯ ಸಾವನ್ನಪ್ಪಿರುವ ಪಾದ್ರಿ ಫ್ಲೆಚರ್ ಪೀಟರ್ ಕ್ರೇಗ್ ಎಂಬ ಬಾಲಕನನ್ನು ಲೈಂಗಿಕ ಶೋಷಣೆಗೊಳಪಡಿಸಿದ್ದ ಎಂಬುದರಲ್ಲಿ ಯಾವುದೇ ಅನುಮಾನಗಳು ಉಳಿದಿರಲಿಲ್ಲ. ಆದರೆ ಆ ಸಮಯದಲ್ಲಿ ಕಿರಿಯ ಪಾದ್ರಿಯಾಗಿದ್ದ ವಿಲ್ಸನ್‌ಗೆ ಈ ಬಗ್ಗೆ ತಿಳಿದಿತ್ತೇ ಎಂಬುದೇ ಪ್ರಮುಖ ಪ್ರಶ್ನೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News