ಕಲ್ಯಾಣಪುರ ಬಳಿ 180 ಟನ್‌ಗೂ ಅಧಿಕ ಮರಳು ದಾಸ್ತಾನು ಪತ್ತೆ; ಎಸಿ ನೇತೃತ್ವದಲ್ಲಿ ದಾಳಿ, ಸಮಗ್ರ ತನಿಖೆ

Update: 2018-05-23 16:49 GMT

ಉಡುಪಿ, ಮೇ 23: ಕಲ್ಯಾಣಪುರ ಗ್ರಾಪಂ ವ್ಯಾಪ್ತಿಯ ಮೂಡುತೋನ್ಸೆಯ ಅಗಸನ ಕೆರೆ ಸಮೀಪ ಅಕ್ರಮವಾಗಿ ಮರಳು ಸಂಗ್ರಹಿಸಿಟ್ಟಿದ್ದ ಸ್ಥಳಕ್ಕೆ ಬುಧವಾರ ಸಂಜೆ ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ ಭೂಬಾಲನ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಮರಳು ದಾಸ್ತಾನಿನ ಕುರಿತು ಸಮಗ್ರ ತನಿಖೆ ನಡೆಸುತ್ತಿದೆ.

ಸಂತೆಕಟ್ಟೆ ಪೇಟೆಯಿಂದ ಸುಮಾರು ಮೂರು ಕಿ.ಮೀ. ದೂರದ ಅಗಸನ ಕೆರೆಗೆ ತಾಗಿಕೊಂಡಿರುವ ಖಾಲಿ ಜಾಗದಲ್ಲಿ 180ಕ್ಕೂ ಅಧಿಕ ಲೋಡ್ ದಾಸ್ತಾನು ಮಾಡಲಾಗಿದೆ. ಸಂಜೆ 6 ಗಂಟೆ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ ನೋಟೀಸ್ ಜಾರಿ ಮಾಡಿದ್ದಾರೆ.

ಕಲ್ಯಾಣಪುರ ಸಂತೆಕಟ್ಟೆ ಆಸುಪಾಸಿನಲ್ಲಿ ನಡೆಯುತ್ತಿರುವ ಬೃಹತ್ ಕಟ್ಟಡಗಳ ನಿರ್ಮಾಣಕ್ಕಾಗಿ ಕಲ್ಯಾಣಪುರ ಹೊಳೆ(ಸ್ವರ್ಣ ನದಿ)ಯಿಂದ ಮರಳು ತೆಗೆದು ದಾಸ್ತಾನು ಇರಿಸಲಾಗಿದೆ ಎಂದು ತಿಳಿದುಬಂದಿದೆ. ಈ ಜಾಗದ ಸುತ್ತಮುತ್ತ ಹತ್ತಕ್ಕೂ ಅಧಿಕ ಮನೆಗಳಿವೆ. ಆದರೂ ಇಷ್ಟೊಂದು ಪ್ರಮಾಣದಲ್ಲಿ ಮರಳನ್ನು ಹೇಗೆ ಸಂಗ್ರಹಿಸಿ ಇಡಲಾಗಿದೆ ಎಂಬುದು ಅಧಿಕಾರಿಗಳ ಪ್ರಶ್ನೆಯಾಗಿದೆ.

ಯಾವ ಕಾರಣಕ್ಕಾಗಿ ಇಷ್ಟೊಂದು ಪ್ರಮಾಣದಲ್ಲಿ ಮರಳನ್ನು ಸಂಗ್ರಹಿಸಿ ಡಲಾಗಿದೆ. ಇಲ್ಲಿರುವ 180 ಟನ್ ಮರಳು ತೆಗೆಯಲು ಹಾಗೂ ಸಂಗ್ರಹಿಸಲು ಪರವಾನಿಗೆ ಪಡೆಯಲಾಗಿದೆಯೇ ಹಾಗೂ ಈ ಜಾಗದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮರಳು ಸಂಗ್ರಹಕ್ಕೆ ಪರವಾನಿಗೆ ಪಡೆಯಲಾಗಿದೆಯೇ ಎಂಬ ಕುರಿತು ಸೂಕ್ತ ದಾಖಲೆಗಳೊಂದಿಗೆ ಸ್ಪಷ್ಟನೆ ನೀಡುವಂತೆ ನೋಟೀಸು ನೀಡಲಾಗಿದೆ ಎಂದು ಎಸಿ ಭೂಬಾಲನ್ ತಿಳಿಸಿದ್ದಾರೆ. ಸಮರ್ಪಕ ಉತ್ತರ ಬಾರದಿದ್ದರೆ ಮರಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಸ್ಥಳಕ್ಕೆ ಮಲ್ಪೆ ಪೊಲೀಸ್ ಠಾಣೆಯ ಅಧಿಕಾರಿಗಳು, ಸಿಬ್ಬಂದಿ ಸಮೇತ ಹಾಜರಾಗಿದ್ದು, ಸಂಜೆಯಾದ ಕಾರಣ ಮಹಜರು ಪ್ರಕ್ರಿಯೆ ಕಷ್ಟವಾಗಿದೆ. ಹೀಗಾಗಿ ಸ್ಥಳದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿಗಳು ಪೊಲೀಸರಿಗೆ ಮನವಿ ಮಾಡಿದ್ದಾರೆ. ಕುಂದಾಪುರ ಎಸಿ ನೇತೃತ್ವದಲ್ಲಿ ನಡೆದ ದಾಳಿಯ ವೇಳೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ, ಬ್ರಹ್ಮಾವರ ಕಂದಾಯ ಅಧಿಕಾರಿ ಹಾಗೂ ಕಲ್ಯಾಣಪುರ ಪಂಚಾಯಿತಿ ವಿಎ ಉಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News