ನೇಣು ಬಿಗಿದು ಯವಕ ಆತ್ಮಹತ್ಯೆ
Update: 2018-05-23 22:26 IST
ಮಲ್ಪೆ, ಮೇ 23: ವಿದೇಶದಲ್ಲಿ ಉದ್ಯೋಗದಲ್ಲಿದ್ದು 15 ದಿನಗಳ ಹಿಂದಷ್ಟೇ ಊರಿಗೆ ಬಂದಿದ್ದ ಯುವಕನೊಬ್ಬ ಮನೆಯ ಸಮೀಪದ ಹಲಸಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡೆಕಾರಿನಿಂದ ವರದಿಯಾಗಿದೆ.
ಮೃತರನ್ನು ಜಾಯ್ಸನ್ ಡಿಸೋಜ ಎಂಬವರ ಮಗ ಜಾಯ್ಸನ್ (28) ಎಂದು ಗುರುತಿಸಲಾಗಿದೆ. ಇವರು 15ದಿನಗಳ ಹಿಂದೆ ಊರಿಗೆ ಬಂದಿದ್ದು, ಮನೆಯಲ್ಲಿ ಯಾರೊಂದಿಗೂ ಸರಿಯಾಗಿ ಮಾತನಾಡದೇ ಒಬ್ಬನೇ ಇರುತಿದ್ದರು ಎನ್ನಲಾಗಿದೆ. ಮೇ 22ರಂದು ರಾತ್ರಿ ಊಟ ಮಾಡಿ ಮಲಗಿದ ಜಾಯ್ಸನ್, ಇಂದು ಬೆಳಗ್ಗೆ 6:30ರ ಸುಮಾರಿಗೆ ಮನೆಯ ಸಮೀಪದ ಹಲಸಿನ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.