ಎವರೆಸ್ಟ್ ಏರುವ ಎಂಟನೇ ಪ್ರಯತ್ನದಲ್ಲಿ ಸಾವನ್ನಪ್ಪಿದ ಪರ್ವತಾರೋಹಿ

Update: 2018-05-23 17:18 GMT

ಕಾಠ್ಮಂಡು, ಮೇ 23: ಜಪಾನ್ ಮೂಲದ ಪರ್ವತಾರೋಹಿಯೊಬ್ಬರು ಎವರೆಸ್ಟ್ ಶಿಖರವನ್ನೇರುವ ತಮ್ಮ ಎಂಟನೇ ಪ್ರಯತ್ನದಲ್ಲಿ ಸಾವನ್ನಪ್ಪಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

36ರ ಹರೆಯದ ನೊಬುಕಝು ಕುರಿಕಿಯ ಮೃತದೇಹ 6,400 ಮೀಟರ್ ಎತ್ತರದಲ್ಲಿರುವ ಎರಡನೇ ಶಿಬಿರದಲ್ಲಿ ಪತ್ತೆಯಾಗಿರುವುದಾಗಿ ಪ್ರವಾಸೋದ್ಯಮ ಇಲಾಕೆಯ ಅಧಿಕಾರಿ ಗ್ಯಾನೇಂದ್ರ ಶ್ರೇಷ್ಠ ತಿಳಿಸಿದ್ದಾರೆ.

ಇದಕ್ಕೂ ಮೊದಲು ಕುರಿಕಿ ಎವರೆಸ್ಟ್ ಏರಲು ಏಳು ಬಾರಿ ಪ್ರಯತ್ನಿಸಿದ್ದರು.

2012ರಲ್ಲಿ ಕುರಿಕಿ 8,230 ಮೀಟರ್ ಎತ್ತರದಲ್ಲಿ ಮೈನಸ್ ಇಪ್ಪತ್ತು ಸೆಲ್ಷಿಯಸ್ ಉಷ್ಣಾಂಶವಿದ್ದ ಹಿಮದ ಗುಹೆಯಲ್ಲಿ ಎರಡು ದಿನಗಳನ್ನು ಕಳೆದಿದ್ದರು. ಈ ವೇಳೆ ಅವರ ಬೆರಳುಗಳು ಹಿಮಕಡಿತಕ್ಕೆ ಒಳಗಾಗಿದ್ದ ಪರಿಣಾಮ ಒಂಬತ್ತು ಬೆರಳುಗಳ ತುದಿಗಳನ್ನು ಕತ್ತರಿಸಬೇಕಾಗಿ ಬಂದಿತ್ತು. ಕುರಿಕಿ ಸಾವಿನ ನಂತರ ಪರ್ವತಾರೋಹಣದ ಈ ಮಾಸದಲ್ಲಿ ಶಿಖರದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಎರಡಕ್ಕೇರಿದೆ. ಇದಕ್ಕೂ ಮೊದಲು ಮ್ಯಾಸಿಡೊನಾ ಮೂಲದ 63ರ ಹರೆಯದ ಜಾರ್ಜಿ ಪೆಟ್ಕೊವ್ ಎವರೆಸ್ಟ್ ಏರುವ ಸಾಹಸದಲ್ಲಿ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News