ನೋಟ್ ಬ್ಯಾನ್ ಪರಿಣಾಮ; ನಗದು ಬೇಡಿಕೆ ಶೇ. 7 ಏರಿಕೆ: ಆರ್‌ಬಿಐ

Update: 2018-05-23 17:36 GMT

ಹೊಸದಿಲ್ಲಿ, ಮೇ 23: ಭ್ರಷ್ಟಾಚಾರ ನಿರ್ಮೂಲನೆ ಮತ್ತು ದೇಶವನ್ನು ನಗದುರಹಿತ ಆರ್ಥಿಕತೆಯನ್ನಾಗಿ ಪರಿವರ್ತಿಸಬೇಕೆಂಬ ಉದ್ದೇಶದಿಂದ ಮಾಡಲಾದ ನೋಟು ಅಮಾನ್ಯೀಕರಣದ ಪರಿಣಾಮದಿಂದ ದೇಶವಿನ್ನೂ ಸಂಪೂರ್ಣವಾಗಿ ಹೊರಬಂದಿಲ್ಲ. ಆದರೆ ದೇಶ ನಗದುರಹಿತ ಆರ್ಥಿಕತೆಯಾಗುವುದು ದೂರದ ಮಾತಾಗಿದ್ದು, ಬದಲಾಗಿ ನಗದು ಬೇಡಿಕೆ ಶೇ. ಏಳು ಏರಿಕೆಯಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಜನರ ನಗದಿನ ಬೇಡಿಕೆಯನ್ನು ಕರೆನ್ಸಿ ವಿದ್ ದ ಪಬ್ಲಿಕ್ (ಸಿಡಬ್ಲ್ಯೂಪಿ) ಎಂದು ಕರೆಯಲಾಗುತ್ತದೆ. ನೋಟು ರದ್ದತಿಯ ಮುನ್ನ ಹದಿನೇಳು ಟ್ರಿಲಿಯನ್ ಇದ್ದ ಸಿಡಬ್ಲ್ಯೂಪಿ ಈ ವರ್ಷ ಎಪ್ರಿಲ್‌ನಲ್ಲಿ ಶೇ. ಏಳು ಏರಿಕೆ ಕಂಡು 18.25 ಟ್ರಿಲಿಯನ್ ತಲುಪಿದೆ ಎಂದು ಆರ್‌ಬಿಐ ತಿಳಿಸಿದೆ. ಭ್ರಷ್ಟಾಚಾರವನ್ನು ನಿಗ್ರಹಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ 2016ರ ನವೆಂಬರ್‌ನಲ್ಲಿ ಐನ್ನೂರು ಮತ್ತು ಒಂದು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ್ದರು. ಇದರಿಂದಾಗಿ ದೇಶದಲ್ಲಿ ಚಲಾವಣೆಯಲ್ಲಿದ್ದ ಶೇ.80 ನಗದು ನಿರುಪಯುಕ್ತಗೊಂಡಿತ್ತು. ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಸರಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿತ್ತು. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಅಭಿವೃದ್ಧಿಪಡಿಸಿದ ಡಿಜಿಟಲ್ ಪಾವತಿ ವ್ಯವಸ್ಥೆ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ ಅಂತರ್‌ಬ್ಯಾಂಕ್ ವ್ಯವಹಾರವನ್ನು ಸುಲಭಗೊಳಿಸುವ ಮೂಲಕ 2017-18ರಲ್ಲಿ ಒಂದು ಲಕ್ಷ ಕೋಟಿ ರೂ. ವ್ಯವಹಾರ ನಡೆಸಿದೆ ಎಂದು ಆರ್‌ಬಿಐ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News