ದ.ಕ. ಜಿಲ್ಲೆ: ಇನ್ನೂ ಹಂಚಿಕೆಯಾಗದ ಆರ್‌ಟಿಇ 2ನೆ ಸುತ್ತಿನ ಸೀಟುಗಳು
ಮಂಗಳೂರು, ಮೇ 24: ರಾಜ್ಯ ಸರಕಾರದ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ 2018-19ರ ಸಾಲಿನ ಆರ್‌ಟಿಇ ಇದರ 2ನೆ ಸುತ್ತಿನ ಸೀಟುಗಳು ಇನ್ನೂ ಹಂಚಿಕೆಯಾಗಿಲ್ಲ. ಇದರಿಂದ ಸೀಟು ಹಂಚಿಕೆಗಾಗಿ ಕಾದು ಕುಳಿತಿರುವ ವಿದ್ಯಾರ್ಥಿಗಳು ಮತ್ತವರ ಪೋಷಕರು ಗೊಂದಲದಲ್ಲಿ ಸಿಲುಕಿದ್ದಾರೆ. ಇನ್ನೇನೋ ಮೇ 28ರಿಂದ ತರಗತಿಗಳು ಆರಂಭಗೊಳ್ಳುತ್ತಿದ್ದು, ಯಾವ ಶಾಲೆಗೆ ಸೇರ್ಪಡೆಗೊಳ್ಳಬೇಕು ಎಂದು ತಿಳಿಯದೆ ಆತಂಕಿತರಾಗಿರುವ ವಿದ್ಯಾರ್ಥಿಗಳು ಇಲಾಖೆಯ ಕಾರ್ಯ ವೈಖರಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆರಂಭದಲ್ಲೇ ವಿಘ್ನ: ಶಿಕ್ಷಣ ಇಲಾಖೆಯು ಫೆ.23ರಿಂದ ಮಾ.21ರೊಳಗೆ ಅರ್ಜಿ ಸಲ್ಲಿಸಲು ತನ್ನ ವೆಬ್‌ಸೈಟ್‌ನಲ್ಲಿ ಘೋಷಿಸಿತ್ತು. ಆದರೆ ಆರಂಭದ 10 ದಿನಗಳ ಕಾಲ ತಾಂತ್ರಿಕ ತೊಂದರೆ ಕಾಡಿತ್ತು. ಇದರಿಂದ ಮಾ.1ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿತ್ತು. ಆ ಬಳಿಕವೂ ವೆಬ್‌ಸೈಟ್‌ನಲ್ಲಿ ನಿರಂತರ ಸರ್ವರ್ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಸಲು ಮಾ.28ರವರೆಗೆ ಕಾಲಾವಕಾಶ ನೀಡಲಾಗಿತ್ತು. ಒಟ್ಟಾರೆಯಾಗಿ ಇಲಾಖೆಯ ಅಸಮರ್ಪಕ ಸೇವೆಯಿಂದ ಅರ್ಜಿ ಸಲ್ಲಿಸುವ ಸಂದರ್ಭದಲ್ಲೇ ವಿದ್ಯಾರ್ಥಿಗಳು ಬಹಳಷ್ಟು ತೊಂದರೆ ಅನುಭವಿಸಿದ್ದರು.
ರಾಜ್ಯದಲ್ಲಿ ಈ ಬಾರಿ ಸಲ್ಲಿಕೆಯಾಗಿದ್ದ 2.28 ಲಕ್ಷ ಆರ್‌ಟಿಇ ಅರ್ಜಿಗಳಿಗೆ ಸಂಬಂಧಿಸಿದಂತೆ ಪ್ರಥಮ ಸುತ್ತಿನ ಸೀಟು ಹಂಚಿಕೆಯು ಎ.20ರಂದು ನಡೆದಿತ್ತು. ಆದರೆ 2ನೆ ಹಂತದ ಸೀಟು ಹಂಚಿಕೆಯು ಈವರೆಗೂ ನಡೆಯದೆ ಕಾರಣ ಪೋಷಕರು ಮತ್ತು ವಿದ್ಯಾರ್ಥಿಗಳು ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ಆರ್‌ಟಿಇ ಸೀಟು ಸಿಗದಿದ್ದಲ್ಲಿ ಪರ್ಯಾಯವಾಗಿ ಖಾಸಗಿ ಸಂಸ್ಥೆಗಳ ಸೀಟು ಕಾಯ್ದಿರಿಸಿದವರು ಕೂಡ ಇದೀಗ ಗೊಂದಲಕ್ಕೀಡಾಗಿದ್ದಾರೆ. ತನ್ಮಧ್ಯೆ ಖಾಸಗಿ ಶಿಕ್ಷಣ ಸಂಸ್ಥೆಯವರು ಶೀಘ್ರ ಮಕ್ಕಳ ದಾಖಲಾತಿ ಮಾಡದಿದ್ದರೆ ಬೇರೆಯವರಿಗೆ ಸೀಟು ನೀಡಲಾಗುವುದು ಅಲ್ಲದೆ ಮೇ 28ರೊಳಗೆ ದಾಖಲಾತಿಗೆ ಕೊನೆಯ ದಿನವಾಗಿದೆ ಎಚ್ಚರಿಸುತ್ತಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಸಿಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಇಮ್ರಾನ್ ಪಿ.ಜೆ. ‘ಒಂದೆಡೆ ಆರ್‌ಟಿಇ ಸಿಟು ಹಂಚಿಕೆಯಾಗದೆ, ಇನ್ನೊಂದೆಡೆ ಇದನ್ನೇ ನಂಬಿ ಶಾಲೆಗೆ ದಾಖಲಾತಿಯೂ ಮಾಡದ ಪೋಷಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ದ.ಕ.ಜಿಲ್ಲಾ ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಿದರೆ ನಮಗೆ ಇದರ ಬಗ್ಗೆ ಮಾಹಿತಿಯಿಲ್ಲ. ಬೆಂಗಳೂರು ಕಚೇರಿಯನ್ನು ಸಂಪರ್ಕಿಸಿ ಎಂದು ಉತ್ತರಿಸುತ್ತಿದ್ದಾರೆ. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರತೀ ವರ್ಷವು ತಾಂತ್ರಿಕ ತೊಂದರೆಗಳಿರುತ್ತಿದ್ದು, ಈ ವರ್ಷವು ಕೂಡಾ ಇದೇ ತೊಂದರೆಯನ್ನು ವಿದ್ಯಾರ್ಥಿಗಳು ಆರಂಭದಲ್ಲಿಯೇ ಎದುರಿಸಿದ್ದಾರೆ. ಹಾಗಾಗಿ ಇಲಾಖೆಯು ಆದಷ್ಟು ಬೇಗ ಹಂಚಿಕೆಯಾಗಲು ಬಾಕಿ ಇರುವ ಸೀಟನ್ನು ಇತ್ಯರ್ಥ ಮಾಡಿ ಮುಗಿಸಬೇಕು, ಇಲ್ಲವಾದಲ್ಲಿ ಶಿಕ್ಷಣ ಇಲಾಖೆಗೆ ವಿದ್ಯಾರ್ಥಿ-ಪೋಷಕರ ಜೊತೆಗೂಡಿ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.