ಮಂಗಳೂರು ವಿವಿ ಕ್ಯಾಂಪಸ್‌ನ ಜೀವವೈವಿದ್ಯತೆಯ ಕುರಿತ ಪುಸ್ತಕ ಬಿಡುಗಡೆ
ಕೊಣಾಜೆ, ಮೇ 24: ಮಂಗಳೂರು ವಿಶ್ವವಿದ್ಯಾಲಯದ ಮಂಗಳಗಂಗೋತ್ರಿ ಕ್ಯಾಂಪಸ್‌ನ ಜೀವವೈವಿಧ್ಯತೆಯ ದಾಖಲಾತಿಯ ಪುಸ್ತಕ ಬಿಡುಗಡೆ ಹಾಗೂ ವೆಬ್‌ಸೈಟ್‌ನಲ್ಲಿ ಇ-ಬುಕ್ ಅನಾವರಣ ಕಾರ್ಯಕ್ರಮವು ಗುರುವಾರ ಮಂಗಳೂರು ವಿವಿ ಸಿಂಡಿಕೇಟ್ ಸಭಾಂಗಣದಲ್ಲಿ ನಡೆಯಿತು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಚ್.ಎ.ರಂಗನಾಥ್, ವಿಶ್ವವಿದ್ಯಾನಿಲಯಗಳು ಎತ್ತಿಕೊಂಡ ಹಲವಾರು ಯೋಜನೆಗಳು ನೂತನ ಆವಿಷ್ಕಾರಗಳೊಂದಿಗೆ ಯಶಸ್ವಿಯಾಗಿ ಮುನ್ನಡೆಯಬೇಕು. ಉತ್ತಮ ಯೋಜನೆಗಳು ಪೂರ್ಣಗೊಂಡು ಅದರ ಪ್ರಯೋಜನ ಸಮಾಜಕ್ಕೆ ಸಿಗುವಂತಾ ಗಬೇಕು. ವಿದ್ಯಾರ್ಥಿಗಳು ಕೇವಲ ಪ್ರಯೋಗಾಲಯ ಅಥವಾ ತರಗತಿಯೊಳಗೆ ಕಲಿತ ವಿದ್ಯೆಯು ನಮ್ಮ ನಮ್ಮ ಉದ್ದೇಶವನ್ನು ಈಡೇರಿಸದು. ಅದಕ್ಕಾಗಿ ಪ್ರಾಯೋಗಿಕವಾಗಿ ತಳಸ್ಪರ್ಶಿ ಅಧ್ಯಯನ ನಡೆಸಿದರೆ ಬಹಳಷ್ಟು ಸಂಗತಿಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಜೀವವೈವಿಧ್ಯತೆಯ ಬಗೆಗಿನ ದಾಖಲಾತಿಯ ಬಗ್ಗೆ ವಿದ್ಯಾರ್ಥಿಗಳು ಕೂಡಾ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಬೆಂಗಳೂರಿನ ವುಡ್ ಸೈಯನ್ಸ್ ಆಂಡ್ ಟೆಕ್ನಾಲಜಿ ಸಂಸ್ಥೆಯ ಸಮೂಹ ಸಂಯೋಜಕರಾದ ಎನ್.ಮೋಹನ್ ಕಾರ್ನಾಟ್ ಅವರು ಮಾತನಾಡಿ, ವಿವಿಧತೆಯನ್ನು ಹೊಂದಿರುವ ನಮ್ಮ ರಾಷ್ಟ್ರವು ಜೀವ ವೈವಿಧ್ಯತೆಯಲ್ಲೂ ಪ್ರಮುಖವಾಗಿ ಗುರುತಿಸಲ್ಪಟ್ಟಿದೆ. ಜೀವ ವೈವಿಧ್ಯತೆಯ ರಾಷ್ಟ್ರಗಳ ಪೈಕಿ ಭಾರತವು 12ನೇ ಸ್ಥಾನದಲ್ಲಿದೆ. ಹೆಚ್ಚು ಮಳೆ ಬೀಳುವ ಅರಣ್ಯ ಪ್ರದೇಶಗಳಲ್ಲಿ ನಾವು ಸುಮಾರು 50%ದಿಂದ 80% ದಷ್ಟು ಜೀವ ವೈವಿಧ್ಯತೆಗಳು ಕಂಡು ಬರುತ್ತವೆ. ಹಾಗೆಯೇ ಮರುಭೂಮಿ ಪ್ರದೇಶಗಳಲ್ಲಿ ಕಡಿಮೆ ಜೀವ ವೈವಿಧ್ಯತೆಗಳು ಇರುವುದನ್ನು ನಾವು ಕಾಣಬಹುದು. ಮಂಗಳಗಂಗೋತ್ರಿ ಕ್ಯಾಂಪಸ್‌ನ ಜೀವವೈವಿಧ್ಯತೆಗಳನ್ನು ಗುರುತಿಸಿ ದಾಖಲಿಸಿರುವುದು ಉತ್ತಮ ಕಾರ್ಯವಾಗಿದ್ದು ಇಂತಹ ಯೋಜನೆಗಳಿಗೆ ಉತ್ತಮ ಪ್ರೋತ್ಸಾಹ ದೊರೆಯಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅವರು ಈ ಪ್ರದೇಶದ ವಾತಾವರಣ, ಇಲ್ಲಿಯ ಮಣ್ಣು ಅನೇಕ ರೀತಿಯ ಜೀವವೈವಿದ್ಯತೆಗೆ ಕಾರಣವಾಗಿದೆ. ಜೀವವೈವಿದ್ಯತೆಯ ಬಗ್ಗೆ ದಾಖಲಾತಿ ತಂಡವು ಉತ್ತಮವಾಗಿ ಯೋಜನೆಯನ್ನು ಪೂರ್ಣಗೊಳಿಸಿದ್ದು ಇದು ಆರಂಭದ ಹಂತವಾಗಿದೆ. ಇದೇ ರೀತಿ ವಿವಿಯ ವ್ಯಾಪ್ತಿಯ ಪ್ರತಿಯೊಂದು ಕ್ಷೇತ್ರದಲ್ಲೂ ಇಂತಹ ದಾಖಲಾತಿ ಕಾರ್ಯ ನಡೆಯಲಿದೆ ಎಂದರು.
ಕ್ಯಾಂಪಸ್ ಜೀವವೈವಿದ್ಯ ಪುಸ್ತಕದ ಸಂಪಾದಕ ಹಾಗೂ ಕಾರ್ಯಕ್ರಮ ಸಂಯೋಜಕರಾದ ಡಾ.ಪ್ರಶಾಂತ್ ನಾಯ್ಕಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ವಿವಿ ಕುಲಸಚಿವ ಪ್ರೊ.ನಾಗೇಂದ್ರ ಪ್ರಕಾಶ್ ಅವರು ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಮುಸ್ತಾಕ್ ಅವರು ವಂದಿಸಿದರು. ರಾಜು ಕೃಷ್ಣ ಅವರು ಕಾರ್ಯಕ್ರಮ ನಿರೂಪಿಸಿದರು.