ವೃದ್ದರ, ದುರ್ಬಲರ ಆಶಾಕಿರಣ ‘ಕೀಪ್ ಮೀ ಸೇಫ್’
ಉಡುಪಿ, ಮೇ 24: ದೈಹಿಕವಾಗಿ ದುರ್ಬಲರು, ವಿಕಲಚೇತನರು ಹಾಗೂ ವೃದ್ಧರು ಎಲ್ಲದಕ್ಕೂ ಮತ್ತೊಬ್ಬರನ್ನು ಅವಲಂಬಿಸಬೇಕಾದ ದುಃಸ್ಥಿತಿ ಹಾಗೂ ನಗರಗಳಲ್ಲಿ ಅಶಕ್ತರು ಇರುವ ಮನೆಗಳನ್ನು ಗುರಿಯಾಗಿಸಿಕೊಂಡು ಲೂಟಿ, ಹತ್ಯೆಗಳು ನಡೆಯುತ್ತಿವೆ. ಇವುಗಳನ್ನು ತಡೆಗಟ್ಟಲು ಬಂಟಕಲ್‌ನ ಶ್ರೀಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ವಿಶಿಷ್ಟ ವ್ಯವಸ್ಥೆಯೊಂದನ್ನು ರೂಪಿಸಿದ್ದಾರೆ.
ಈ ಯೋಜನೆಯಲ್ಲಿ ವೃದ್ಧ/ವಿಕಲಚೇತನ ವ್ಯಕ್ತಿ ವಾಸವಿರುವ ಮನೆಗೆ ಯಾರಾದರೂ ಸಂದರ್ಶಕ ಬಂದ ಪಕ್ಷದಲ್ಲಿ ಮೊದಲು ಆತನು, ವಿಶೇಷ ರೀತಿ ಯಲ್ಲಿ ಸಿದ್ಧಪಡಿಸಿದ ಕರೆಘಂಟೆಯನ್ನು ಒತ್ತಬೇಕು. ಈ ಕರೆಘಂಟೆಯಲ್ಲಿ ವ್ಯಕ್ತಿಯ ಬೆರಳಚ್ಚು ಸಂಗ್ರಹ ಆಗುವ ವಿಶೇಷ ಲಕ್ಷಣ ಅಡಕಗೊಂಡಿದ್ದು, ಸಂದರ್ಶಕನಿಗೆ ಅರಿವಿಲ್ಲದೇ ಆತನ ಬೆರಳಚ್ಚು ಸ್ಕ್ಯಾನ್ ಆಗಿ ಪರಿಚಿತರ ಬೆರಳಚ್ಚುಗಳ ಸಂಪೂರ್ಣ ಸಂಗ್ರಹವಿರುವ ಒಂದು ಡೇಟಾಬೇಸ್‌ನೊಂದಿಗೆ ತಾಳೆ ಹಾಕಿ ನೋಡಲಾಗುತ್ತದೆ.
ಒಂದು ವೇಳೆ ಸಂದರ್ಶಕನ ಬೆರಳಚ್ಚು ಹೊಂದಿಕೆಯಾದ ಪಕ್ಷದಲ್ಲಿ ಅವನ ಪರಿಚಯವನ್ನು ವೃದ್ಧ/ವಿಕಲಚೇತನ/ದೃಷ್ಟಿಮಾಂದ್ಯನ ಸ್ಮಾರ್ಟ್ ಫೋನ್‌ನ ಒಂದು ವಿಶಿಷ್ಟ ಆ್ಯಪ್ ‘ಟೆಕ್ಸ್ಟ್ಟ್ ಟು ಸ್ಪೀಚ್’ ಎಂಬ ತಂತ್ರಜ್ಞಾನ ಮೂಲಕ ಅವನಿಗೆ ಧ್ವನಿಯ ರೂಪದಲ್ಲಿ ಮನೆಯಲ್ಲಿ ಮೊದಲೇ ಅಳವಡಿಸಲಾದ ಶಕ್ತಿಯುತವಾದ ಧ್ವನಿವರ್ಧಕದ ಮೂಲಕ ಕೇಳಿಸುತ್ತದೆ.
ಸಂದರ್ಶಕನು ಆಗಂತುಕ ಇಲ್ಲ, ಅಪರಿಚಿತನಾಗಿದ್ದ ಪಕ್ಷದಲ್ಲಿ ಆತನ ಬೆರಳಚ್ಚು ಸಂಗ್ರಹಕೋಶದಲ್ಲಿನ ಮಾದರಿಗಳಿಗೆ ಹೊಂದಿಕೆಯಾಗದ ಪರಿಣಾಮ ತಕ್ಷಣ ಮನೆಯ ಹೊರಬಾಗಿಲಿನಲ್ಲಿ ಅಳವಡಿಸಲಾದ ಗುಪ್ತ ಕ್ಯಾಮರಾ ಆ ಆಗಂತುಕನ ಛಾಯಾಚಿತ್ರವನ್ನು ಸೆರೆಹಿಡಿದು ಕ್ಷಣ ಮಾತ್ರದಲ್ಲಿ ದೂರದ ಸ್ಥಳದಲ್ಲಿ ಕೆಲಸದಲ್ಲಿ ನಿರತನಾಗಿರುವ ಆತನ ಪೋಷಕ ಯಾ ಯಜಮಾನರಿಗೆ ಕಳುಹಿ ಸುತ್ತದೆ. ಇದಕ್ಕೆ ಪ್ರತಿಯಾಗಿ ಪೋಷಕನು ತಕ್ಷಣ ಕಳುಹಿಸುವ ಬಾಗಿಲನ್ನು ತೆರೆಯುವುದು ಸೂಕ್ತವಲ್ಲ ಎಂಬ ಎಚ್ಚರಿಕೆಯ ಸಂದೇಶ ಮತ್ತು ಶಕ್ತಿಶಾಲಿ ಧ್ವನಿವರ್ಧಕದಲ್ಲಿ ಕೇಳಿಬರುತ್ತದೆ.
ಅಂತೆಯೇ ಮನೆಯ ಮುಂಬಾಗಿಲಿನಲ್ಲಿ ಅಳವಡಿಸಲಾದ ಮತ್ತೊಂದು ಗುಪ್ತ ಸಾಧನ ದಿನದ 24 ಗಂಟೆಗಳ ಕಾಲ ಮನೆಯ ಮುಂದೆ ಏನೇ ಅನು ಮಾನಾಸ್ಪದ ಚಲನವಲನಗಳಾದರೂ ಬಜರ್ ಒಂದು ಬಾರೀ ಶಬ್ದದ ಮೂಲಕ ಎಲ್ಲರನ್ನೂ ಎಚ್ಚರಿಸುವ ಕೆಲಸ ಮಾಡುತ್ತದೆ. ಒಟ್ಟಾರೆಯಾಗಿ ಈ ಯೋಜನೆ ಮನೆಯ ಒಳಗಿರುವ ವೃದ್ಧ/ದುರ್ಬಲರ ಸಂಪೂರ್ಣ ಭದ್ರತೆಯನ್ನು ಖಚಿತ ಪಡಿಸುತ್ತದೆ ಹಾಗೂ ಪೋಷಕರ ನೆಮ್ಮದಿಯನ್ನು ಖಾತ್ರಿಪಡಿಸುತ್ತದೆ.
ಆದುದರಿಂದ ಕೀಪ್ ಮಿ ಸೇಪ್ ತಂತ್ರಜ್ಞಾನ ವೃದ್ಧ ಹಾಗೂ ದುರ್ಬಲರ ಆಶಾಕಿರಣವಾಗಿ ಶ್ರಮಿಸಬಲ್ಲದು ಎಂದು ಬಂಟಕಲ್ ಶ್ರೀಮಧ್ವವಾದಿರಾಜ ತಾಂತ್ರಿಕ ಕಾಲೇಜಿನ ಗಣಕಯಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಿ.ಎನ್.ರಾಮಚಂದ್ರ ಹಾಗೂ ವಿದ್ಯಾರ್ಥಿಗಳಾದ ಸುಶ್ಮಿತಾ ಬಾಳಿಗಾ, ಸೃಷ್ಟಿ, ರಂಜನಿ ಹಾಗೂ ಅಮೃತ ಆಚಾರ್ಯ ಅವರ ತಂಡ ತಿಳಿಸಿದೆ.