ರಿಕ್ಷಾ ಸಾಲ ಮನ್ನಾಕ್ಕೆ ಒತ್ತಾಯ: ಚಾಲಕ ಮಾಲಕರಿಂದ ಮುಖ್ಯಮಂತ್ರಿಗೆ ಮನವಿ
ಪುತ್ತೂರು, ಮೇ 24: ರೈತರ ಸಾಲ ಮನ್ನಾ ಮಾಡಿದ ರೀತಿಯಲ್ಲಿ ಬಡ ಅಟೋ ರಿಕ್ಷಾ ಚಾಲಕ-ಮಾಲಕರ ಬ್ಯಾಂಕ್ ಸಾಲವನ್ನು ಮನ್ನಾಗೊಳಿಸಲು ಆದೇಶ ನೀಡಬೇಕೆಂದು ಪುತ್ತೂರು ನಗರ ಆಟೋ ರಿಕ್ಷಾ ಚಾಲಕ ಮಾಲಕರು ನೂತನ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಪುತ್ತೂರು ತಾಲೂಕಿನಾದ್ಯಂತ ಅಟೋ ರಿಕ್ಷಾಗಳು ಗಣನೀಯ ವಾಗಿ ಏರಿಕೆಯಾಗಿದ್ದು ಇದರಿಂದಾಗಿ ಎಲ್ಲರಿಗೂ ಸಂಪಾದನೆ ಕಡಿಮೆಯಾಗಿದೆ. ವಾಹನದ ಬಿಡಿ ಭಾಗಗಳ ವೆಚ್ಚ, ವಾಹನದ ನಿರ್ವಹಣೆಯ ವೆಚ್ಚ, ಇಂಧನ ವೆಚ್ಚ ಇತ್ಯಾದಿಗಳು ಏರಿದ್ದು ಬಾಡಿಗೆಯಿಂದ ಸಂಸಾರದ ನಿರ್ವಹಣೆಗೆ ಸರಿಯಾಗುತ್ತಿದೆ. ಇದರಿಂದ ವಾಹನ ಸಾಲವನ್ನು ಪಾವತಿಸಲು ಅಸಾಧ್ಯ ವಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸರಕಾರ ರೈತರ ಸಾಲ ಮನ್ನಾ ಮಾಡಿದ ರೀತಿಯಲ್ಲಿ ಬಡ ಅಟೋ ರಿಕ್ಷಾ ಚಾಲಕ-ಮಾಲಕರ ಬ್ಯಾಂಕ್ ಸಾಲವನ್ನು ಮನ್ನಾಗೊಳಿಸಲು ಆದೇಶ ನೀಡಬೇಕು. ಅಲ್ಲದೆ ರಿಕ್ಷಾಗಳಿಗೆ ವರ್ಷಕ್ಕೆ ರೂ. 10 ಸಾವಿರ ವಿಮೆ ವಿಧಿಸಲಾಗಿದ್ದು, ಈ ವಿಮಾ ಕಂತನ್ನು ಕಡಿತಗೊಳಿಸಬೇಕು. ರಿಕ್ಷಾ ಚಾಲಕರಿಗೆ ಬ್ಯಾಡ್ಜ್ ನಲ್ಲಿ ರಿಯಾಯಿತಿ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಅಟೋ ಯೂನಿಯನ್ ಅಧ್ಯಕ್ಷ ಕೆ.ಎಂ. ಮಹಮ್ಮದ್ ಕುಂಞಿ ತಿಳಿಸಿದ್ದಾರೆ.