×
Ad

ಭ್ರೂಣ ಹತ್ಯೆ ತಡೆಯಲು ಜನಜಾಗೃತಿ: ಬಿಹಾರದ ಯುವಕನಿಂದ ಸೈಕಲ್ ಜಾಥಾ

Update: 2018-05-24 19:52 IST

ಪುತ್ತೂರು, ಮೇ 24: ದೇಶದಲ್ಲಿ ನಡೆಯುತ್ತಿರುವ ಭ್ರೂಣ ಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಬಿಹಾರದ ಯುವಕನೊಬ್ಬ ದೇಶದಾದ್ಯಂತ ಸೈಕಲ್ ಮೂಲಕ ಸಂಚರಿಸಿ ಜಾಗೃತಿ ಮೂಡಿಸುತ್ತಿದ್ದು, ಬುಧವಾರ ಕೇರಳದ ಮೂಲಕ ಕರ್ನಾಟಕಕ್ಕೆ ಆಗಮಿಸಿದ ಈತ ಮಾಣಿ ಮೈಸೂರು ರಾಜ್ಯ ರಸ್ತೆಯ ಮೂಲಕ ಬೆಂಗಳೂರಿಗೆ ತೆರಳಿದ್ದಾರೆ.

ಬಿಹಾರ ರಾಜ್ಯದ ಪಾಟ್ನಾ ನಿವಾಸಿ ಮುಹಮ್ಮದ್ ಜಾವೇದ್ (45) ಸಾಮಾಜಿಕ ಕಾಳಜಿಯೊಂದಿಗೆ ಸೈಕಲ್ ಜಾಥಾ ಹೊರಟಿರುವ ಯುವಕ. ಭಯಾನಕ ಸಾಮಾಜಿಕ ಪಿಡುಗಾದ ಭ್ರೂಣ ಹತ್ಯೆಯನ್ನು ತಡೆಯಲು ಜನಜಾಗೃತಿ ಮೂಡಿಸುವ ಏಕೈಕ ಉದ್ದೇಶದಿಂದ ಕಳೆದ 5 ತಿಂಗಳ ಹಿಂದೆ ಸೈಕಲ್‌ನೊಂದಿಗೆ ಬಿಹಾರದ ಪಾಟ್ನಾದಿಂದ ಹೊರಟಿದ್ದು, ಒಟ್ಟು 29 ರಾಜ್ಯಗಳನ್ನು ಸುತ್ತಾಡಲಿರುವ ಅವರು ಮೇ 22ರಂದು ಕೇರಳದ ಮೂಲಕ ಕರ್ನಾಟಕಕ್ಕೆ ತಲುಪಿದರು.

ವೃತ್ತಿಯಲ್ಲಿ ಬಡಗಿಯಾಗಿರುವ ಮುಹಮ್ಮದ್ ಜಾವೇದ್ ಅವರು ವಿವಾಹಿತರಾಗಿದ್ದು ಪತ್ನಿ, ಮಕ್ಕಳೊಂದಿಗೆ ವಾಸವಾಗಿದ್ದಾರೆ. ಇವರ ಕುಟುಂಬವೇ ಬಡಗಿ ವೃತ್ತಿ ಮಾಡುತ್ತಿದೆಯಂತೆ. ಸಣ್ಣ ವಯಸ್ಸಿನಲ್ಲಿಯೇ ಸಾಮಾಜಿಕ ಕಾಳಜಿಯನ್ನು ಮೈಗೂಡಿಸಿಕೊಂಡಿದ್ದ ಜಾವೇದ್ ಈ ಹಿಂದೆ ಸರ್ಕಾರವು ನ್ಯಾಪ್ ಕಿನ್ ಸ್ಯಾನಿಟರಿ ಮೇಲೆ 12.5 ಜಿಎಸ್‌ಟಿ ತೆರಿಗೆ ಹಾಕಿರುವುದನ್ನು ವಿರೋಧಿಸಿ ದೇಶಾದ್ಯಂತ ಜಾಗೃತಿ ಅಭಿಯಾನ ಕೈಗೊಂಡಿದ್ದಾರಂತೆ. ಇದೀಗ ಭ್ರೂಣ ಹತ್ಯೆ ಮತ್ತು ಭ್ರೂಣ ಲಿಂಗ ಪತ್ತೆಯನ್ನು ವಿರೋಧಿಸಿ ಮತ್ತೊಮ್ಮೆ ಸೈಕಲ್ ಏರಿ ಜಾಗೃತಿ ಹೊರಟಿದ್ದಾರೆ.

ದೇಶದ ಒಟ್ಟು 29 ರಾಜ್ಯಗಳನ್ನು ಸುತ್ತಾಡಿ ಜಾಗೃತಿ ಮೂಡಿಸಲು ಮುಂದಾಗಿರುವ ಜಾವೇದ್ ಪಾಟ್ನಾದಿಂದ ಆರಂಭಗೊಂಡ ತನ್ನ ಯಾತ್ರೆಯಲ್ಲಿ ಕಳೆದ 5 ತಿಂಗಳ ಅವಧಿಯಲ್ಲಿ ಉತ್ತರಪ್ರದೇಶ, ಮಧ್ಯಪ್ರದೇಶ, ಆಂದ್ರಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಕೇರಳವನ್ನು ಸುತ್ತಿ ಬಂದಿದ್ದಾರೆ. ಕೇರಳ ಗಡಿ ದಾಟಿ ಕಳೆದ ವಾರದ ಹಿಂದೆ ಕರ್ನಾಟಕಕ್ಕೆ ಆಗಮಿಸಿ ದ.ಕ ಜಿಲ್ಲೆಗೆ ಬಂದಿರುವ ಅವರು ಬಳಿಕ ಬೆಂಗಳೂರಿಗೆ ತೆರಳಿ ಆ ಬಳಿಕ ಉತ್ತರ ಕರ್ನಾಟಕದಲ್ಲಿ ಸಂಚರಿಸಿ ಬೆಳಗಾವಿಗೆ ತೆರಳಿ ಅಲ್ಲಿಂದ ಗೋವಾ ರಾಜ್ಯಕ್ಕೆ ಪ್ರಯಾಣಿಸುವ ಗುರಿ ಹೊಂದಿದ್ದಾರೆ.

ತಾನು ಯಾವುದೇ ಮೋಜಿಗಾಗಿ ದೇಶ ಸುತ್ತಾಟ ನಡೆಸುತ್ತಿಲ್ಲ. ಹೆಸರು ಪಡೆಯಬೇಕು ಅಥವಾ ದಾಖಲೆ ನಿರ್ಮಿಸಬೇಕು ಎಂಬ ಆಕಾಂಕ್ಷೆಯೂ ನನಗಿಲ್ಲ. ಭಯಾನಕ ಸಾಮಾಜಿಕ ಪಿಡುಗುಗಳಲ್ಲಿ ಒಂದಾಗಿರುವ ಭ್ರೂಣ ಹತ್ಯೆಯನ್ನು ತಡೆಯಬೇಕು. ಇದಕ್ಕಾಗಿ ಸಾಮಾಜಿಕ ಜಾಗೃತಿ ಮೂಡಿಸಬೇಕು ಎಂಬುದೊಂದೇ ನನ್ನ ಗುರಿ ಎನ್ನುವ ಜಾವೇದ್ ನಾನು ಸಣ್ಣ ಪ್ರಾಯದಲ್ಲಿಯೇ ಕೆಲವೊಂದು ಸಾಮಾಜಿಕ ಪಿಡುಗುಗಳ ವಿರುದ್ಧ ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದೆ. ನ್ಯಾಪ್ ಕಿನ್ ಸ್ಯಾನಿಟರಿ ಮೇಲೆ ಸರಕಾರ 12. 5 ಜಿಎಸ್‌ಟಿ ಟ್ಯಾಕ್ಸ್ ಹಾಕಿರುವುದನ್ನು ವಿರೋಧಿಸಿ ನಾನು ದೇಶಾದ್ಯಂತ ಅಭಿಯಾನ ಕೈಗೊಂಡಿದ್ದೆ. ಇದೀಗ ಭ್ರೂಣ ಹತ್ಯೆಯನ್ನು ತಡೆಯಲು ದೇಶದ 29 ರಾಜ್ಯಗಳನ್ನು ಸುತ್ತಾಡಬೇಕೆಂಬ ದೃಢ ನಿರ್ಧಾರವನ್ನು ಕೈಗೊಂಡಿದ್ದೇನೆ. ಯಾತ್ರೆಯಲ್ಲಿ ನನಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ದಾರಿಯಲ್ಲಿ ಊಟ, ಉಪಚಾರ ಮತ್ತು ಆರ್ಥಿಕ ಸಹಾಯವನ್ನು ನೀಡಿ ಸಹಕಾರ ನೀಡುತ್ತಾರೆ.  ತನ್ನ ಹೋರಾಟ ನ್ಯಾಯೋಚಿತವಾಗಿದೆ ಎಂದು ಜನ ಬೆಂಬಲ ನೀಡುತ್ತಿದ್ದಾರೆ. ನಾನು ಯಾವುದೇ ಪ್ರಚಾರಕ್ಕಾಗಿ ಅಥವಾ ದಾಖಲೆಗಳಾಗಿ ಈ ಯಾತ್ರೆಯನ್ನು ಕೈಗೊಂಡಿಲ್ಲ. ಜನಜಾಗೃತಿಗಾಗಿ ಮಾತ್ರ ನಾನು ಯಾತ್ರೆ ಕೈಗೊಳ್ಳುತ್ತಿದ್ದೇನೆ. ನಾನು ಯಾರ ವಿರುದ್ಧವೂ ಈ ಹೋರಾಟ ಮಾಡುತ್ತಿಲ್ಲ ವ್ಯವಸ್ಥೆಯ ವಿರುದ್ಧ ಮಾತ್ರ ನನ್ನ ಹೋರಾಟ ಎಂಬುದನ್ನು ಎಲ್ಲಾ ಕಡೆಯೂ ಹೇಳುತ್ತಿದ್ದೇನೆ. ನನ್ನ ಸೈಕಲ್‌ಗೆ ತ್ರಿವರ್ಣ ದ್ವಜವನ್ನು ಕಟ್ಟಿಕೊಂಡು ಸಾಗುತ್ತಿದ್ದೇನೆ. ನನ್ನ ಹೋರಾಟ ಅಪ್ಪಟ ಭಾರತೀಯನಾಗಿಯೇ ವಿನಹ ಯಾವುದೋ ಪಕ್ಷದ ಅಥವಾ ಧರ್ಮದ ಅಭಿಮಾನಿಯಾಗಿ ಈ ಯಾತ್ರೆ ಕೈಗೊಂಡಿಲ್ಲ ಎನ್ನುತ್ತಾರೆ ಜಾವೆದ್.

ಪ್ರಯಾಣದ ವೇಳೆ ಹೆಚ್ಚಿನ ಕಡೆಗಳಲ್ಲಿ ಬಸ್ಸು ನಿಲ್ದಾಣದಲ್ಲೇ ಮಲಗುತ್ತೇನೆ. ಕೆಲವು ಕಡೆಗಳಲ್ಲಿ ಧಾರ್ಮಿಕ ಆಲಯಗಳಲ್ಲಿ ಮಲಗುತ್ತೇನೆ. ಕಳೆದ 5 ತಿಂಗಳ ಯಾತ್ರೆಯಲ್ಲಿ ಎಲ್ಲೂ ನನಗೆ ತೊಂದರೆಯಾಗಿಲ್ಲ ಎನ್ನುವ ಜಾವೇದ್ ಭ್ರೂಣ ಹತ್ಯೆಯಂತಹ ಸಾಮಾಜಿಕ ಪಿಡುಗನ್ನು ತಡೆಯಲು ಯುವ ಸಮುದಾಯ ಮುಂದಾಗಬೇಕು. ಇಲ್ಲಿ ಹೆಣ್ಣು ಮಕ್ಕಳಿಗೂ ಹುಟ್ಟುವ ಮತ್ತು ಎಲ್ಲರಂತೆ ಬದುಕುವ ಅವಕಾಶಗಳಾಗಬೇಕು. ಈ ನಿಟ್ಟಿನಲ್ಲಿ ಭ್ರೂಣ ಹತ್ಯೆ ಸಂಪೂರ್ಣ ನಿಲ್ಲಬೇಕು ಎಂಬುದು ಯುವ ಸಮುದಾಯದ ಆಶಯವಾಗಬೇಕು ಎಂದು ಹೇಳುತ್ತಾರೆ ಮುಹಮ್ಮದ್ ಜಾವೇದ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News