ಮೋದಿಗೆ ‘ಇಂಧನ ಸವಾಲು’ ಒಡ್ಡಿದ ರಾಹುಲ್ ಗಾಂಧಿ !

Update: 2018-05-24 14:23 GMT

ಹೊಸದಿಲ್ಲಿ,ಮೇ 24: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರ ಆನ್‌ಲೈನ್ ‘ಫಿಟ್ನೆಸ್ ಚಾಲೆಂಜ್’ನ್ನು ಪ್ರಧಾನಿ ನರೇಂದ್ರ ಮೋದಿಯವರು ಸ್ವೀಕರಿಸಿರುವ ಬೆನ್ನಿಗೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಅವರಿಗೆ ದೇಶದಲ್ಲಿ ಏರುತ್ತಿರುವ ಇಂಧನ ಬೆಲೆಗಳನ್ನು ತಗ್ಗಿಸಿ ಇಲ್ಲದಿದ್ದರೆ ತನ್ನ ಪಕ್ಷದಿಂದ ದೇಶವ್ಯಾಪಿ ಪ್ರತಿಭಟನೆಯನ್ನು ಎದುರಿಸುವಂತೆ ‘ಫ್ಯುಯೆಲ್ ಚಾಲೆಂಜ್(ಇಂಧನ ಸವಾಲು)’ ಒಡ್ಡಿದ್ದಾರೆ.

‘‘ಪ್ರಿಯ ಪ್ರಧಾನ ಮಂತ್ರಿಗಳೇ,ನೀವು ಕೊಹ್ಲಿಯವರ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿರುವುದು ಸಂತೋಷ. ಇಲ್ಲಿ ನನ್ನದೂ ಒಂದು ಸವಾಲಿದೆ. ಏರುತ್ತಿರುವ ಇಂಧನ ಬೆಲೆಗಳನ್ನು ತಗ್ಗಿಸಿ,ಇಲ್ಲದಿದ್ದರೆ ಕಾಂಗ್ರೆಸ್ ದೇಶವ್ಯಾಪಿ ಪ್ರತಿಭಟನೆಯನ್ನು ನಡೆಸಿ ನೀವು ಹಾಗೆ ಮಾಡುವಂತೆ ನಿಮ್ಮ ಮೇಲೆ ಒತ್ತಡ ತರಲಿದೆ. ನಿಮ್ಮ ಪ್ರತಿಕ್ರಿಯೆಗಾಗಿ ನಾನು ಕಾಯುತ್ತಿದ್ದೇನೆ’’ಎಂದು ‘ಫ್ಯುಯೆಲ್ ಚಾಲೆಂಜ್’ ಹ್ಯಾಷ್‌ಟ್ಯಾಗ್ ಬಳಸಿ ರಾಹುಲ್ ಟ್ವೀಟಿಸಿದ್ದಾರೆ.

ಇಂಧನ ಬೆಲೆಗಳು ಗಗನಕ್ಕೇರುತ್ತಿದ್ದರೂ ಮೌನವಾಗಿರುವುದಕ್ಕಾಗಿ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಅವರೂ ಮೋದಿಯವರನ್ನು ಟೀಕಿಸಿದ್ದಾರೆ. ಪೆಟ್ರೋಲ್ ಮತ್ತು ಡೀಸಿಲ್‌ಗಳ ಮೇಲೆ ಅಬಕಾರಿ ಸುಂಕದ ಮೂಲಕ ಲೂಟಿ ಮಾಡಿರುವ 10 ಲ.ಕೋ.ರೂ.ಗಳನ್ನು ಇಂಧನ ಬೆಲೆಗಳನ್ನು ಇಳಿಸಲು ಬಳಸುವಂತೆ ಮತ್ತು ಶ್ರೀಸಾಮಾನ್ಯನ ‘ಆರ್ಥಿಕ ಫಿಟ್‌ನೆಸ್’ಅನ್ನು ಮರುಸ್ಥಾಪಿಸುವಂತೆ ಅವರು ಸವಾಲೆಸೆದಿದ್ದಾರೆ. ಅಲ್ಲದೆ,ಭರವಸೆ ನೀಡಿದ್ದಂತೆ ಎರಡು ಕೋಟಿ ಉದ್ಯೋಗಗಳನ್ನು ಒದಗಿಸುವ ಮೂಲಕ ಯುವಜನರ ‘ಜಾಬ್ ಫಿಟ್ನೆಸ್’ನ್ನೂ ಮರುಸ್ಥಾಪಿಸುವಂತೆ ಅವರು ಕುಟುಕಿದ್ದಾರೆ.

ರೈತರ ಬೆಳೆಗಳಿಗೆ ಸೂಕ್ತ ಬೆಲೆಗಳನ್ನು ಒದಗಿಸುವಂತೆ ಮತ್ತು ವಿದೇಶಗಳಲ್ಲಿರುವ 80 ಲ.ಕೋ.ಕಪ್ಪುಹಣವನ್ನು ಭಾರತಕ್ಕೆ ವಾಪಸ್ ತರುವಂತೆಯೂ ಅವರು ಸವಾಲು ಹಾಕಿದ್ದಾರೆ. ಪಾಕ್ ಪ್ರಾಯೋಜಿತ ಭಯೋತ್ಪಾದನೆಯನ್ನು ಮತ್ತು ಡೋಕಾ ಲಾದಲ್ಲಿ ಚೀನಿ ಅತಿಕ್ರಮಣವನ್ನು ನಿಲ್ಲಿಸುವ ಮೂಲಕ ‘ನ್ಯಾಷನಲ್ ಸೆಕ್ಯೂರಿಟಿ ಫಿಟ್ನೆಸ್’ ಸವಾಲನ್ನೂ ಮೋದಿಯವರಿಗೆ ಒಡ್ಡಿರುವ ಸುರ್ಜೆವಾಲಾ,‘ಆಡಳಿತ ಸವಾಲ’ನ್ನು ಒಪ್ಪಿಕೊಳ್ಳುವಂತೆಯೂ ಸರಣಿ ಟ್ವೀಟ್‌ಗಳಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News