ಕಾಶ್ಮೀರದಿಂದ ಕನ್ಯಾಕುಮಾರಿಗೆ ಸೈಕಲ್ ಸವಾರಿ: 19 ದಿನಗಳಲ್ಲಿ ದಾಖಲೆ ನಿರ್ಮಿಸಿದ ಮೂಡುಬಿದಿರೆಯ ಯುವಕ
ಮಂಗಳೂರು, ಮೇ 24: ಮೂಡುಬಿದಿರೆ ನೆಲ್ಲಿಕಾರಿನ 27 ವರ್ಷದ ಯುವಕ ಪ್ರಸಾದ್ ವಿಜಯಶೆಟ್ಟಿ ಕಾಶ್ಮೀರದಿಂದ ಕನ್ಯಾಕುಮಾರಿಗೆ 19 ದಿನಗಳ ಸೈಕಲ್ ಪ್ರಯಾಣ ಮಾಡಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.
ಈ ಹಿಂದೆ ಮಹಾರಾಷ್ಟ್ರದ ಸಂತೋಷ್ ಗೋಳಿಯವರು ಕಾಶ್ಮೀರದಿಂದ ಕನ್ಯಾ ಕುಮಾರಿಗೆ 23 ದಿನಗಳ ಸೈಕಲ್ ಯಾತ್ರೆ ಮಾಡಿ ದಾಖಲೆ ನಿರ್ಮಿಸಿದ್ದರು. ಇದೀಗ ಆ ದಾಖಲೆಯನ್ನು ಮೀರಿ ಮೂಡುಬಿದಿರೆಯ ಯುವಕ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಪ್ರಸಾದ್ ಈ ಹಿಂದೆ ಬೆಂಬಲಿಗರೊಂದಿಗೆ ಯಾತ್ರೆ ಕೈಗೊಂಡಿದ್ದರು. ಇದೀಗ ಈ ಯಾತ್ರೆಯ ಮೂಲಕ ಕಾಶ್ಮೀರದಿಂದ ಕನ್ಯಾಕುಮಾರಿಗೆ 2 ಬಾರಿ ಸೈಕಲ್ ಯಾತ್ರೆ ಮಾಡಿದ ಭಾರತದ ಮೊದಲ ಯುವಕ ಎಂಬ ಹೆಗ್ಗಳಿಕೆಯ ದಾಖಲೆಯೂ ಇವರದ್ದಾಗಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಪ್ರಸಾದ್ ವಿಜಯ ಶೆಟ್ಟಿ, ಪರ್ವತಾರೋಹಣದಲ್ಲಿ ಇನ್ನಷ್ಟು ಸಾಹಸ ಮಾಡುವ ಕನಸಿದೆ. ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಹತ್ತುವ ಬಗ್ಗೆ ತರಬೇತಿ ಪಡೆಯುತ್ತಿರುವುದಾಗಿ ಹೇಳಿದರು.
ಈ ಕನಸು ನನಸಾಗಲು ಸುಮಾರು 40 ಲಕ್ಷ ರೂಪಾಯಿ ಖರ್ಚು ಆಗುತ್ತದೆ. ಪ್ರಾಯೋಜಕರ ನಿರೀಕ್ಷೆಯಲ್ಲಿರುವುದಾಗಿ ಅವರು ಈ ಸಂದರ್ಭ ಹೇಳಿದರು. ಪ್ರಸಾದ್ ಅವರು 2018ರ ಮಾರ್ಚ್ 14ರಿಂದ ಎಪ್ರಿಲ್ 11ರವರೆಗೆ ಕಾಶ್ಮೀರದಿಂದ ಹೊರಟು ಕನ್ಯಾಕುಮಾರಿಗೆ ಸಾಹಸ ಕೈಕೊಂಡಿದ್ದರು. ಸೈನಿಕರಿಗಾಗಿ ಸೈಕಲ್ ಯಾತ್ರೆ (ಪೆಡಲ್ ಫಾರ್ ಡಿಫೆನ್ಸ್ ಪೀಪಲ್) ಮತ್ತು ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎಂಬ ಘೋಷಣೆನೊಂದಿಗೆ ಸೈಕಲ್ ಪ್ರಯಾಣ ಅವರದ್ದಾಗಿತ್ತು. ಯಾತ್ರೆಯುದ್ದಕ್ಕೂ ತುಳುನಾಡಿನ ಬಾವುಟವನ್ನು ಪ್ರಸಾದ್ ಪ್ರದರ್ಶಿಸಿದ್ದಾರೆ.
ತ್ರಿಡಿ ಆನಿಮೇಷನ್ ವಿಭಾಗದ ಸಿನೆಮಾಗಳಲ್ಲಿ ಕೆಲಸ ಮಾಡಿ ಅನುಭವವಿರುವ ಅವರಿಗೆ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಕನಸು. ಈ ನಿಟ್ಟಿನಲ್ಲಿ ಪರ್ವತಾರೋಹಣದ ಬಗ್ಗೆ ಮಾಹಿತಿ ಪಡೆದುಕೊಂಡರು. ರಾಜಸ್ಥಾನದ ಮೌಂಟ್ ಅಬುವಿನಲ್ಲಿ ಈ ಬಗ್ಗೆ ತರಬೇತಿ ಗಳಿಸಿದರು. ಕಾಶ್ಮೀರ, ಸಿಕ್ಕಿಂ, ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಉನ್ನತ ತರಬೇತಿಯನ್ನು ಪಡೆದಿದ್ದಾರೆ. ಸಾಹಸದಲ್ಲಿ ಇನ್ನಷ್ಟು ಬದಲಾವಣೆ ಮಾಡಬೇಕೆಂಬ ಆಸೆಯಲ್ಲಿ ಸೈಕ್ಲಿಂಗ್ ಆರಂಭಿಸಿದರು. ಮೊದಲ ಬಾರಿ 2017ರಲ್ಲಿ ಜನವರಿ 11ರಿಂದ ಮಾರ್ಚ್ 12ರವರೆಗೆ ‘ಕ್ಲೀನ್ ಇಂಡಿಯಾ ಗ್ರೀನ್ ಇಂಡಿಯಾ’ ಎನ್ನುವ ಸ್ಲೋಗನ್‌ನೊಂದಿಗೆ ಕಾಶ್ಮೀರದಿಂದ ಕನ್ಯಾಕುಮಾರಿಗೆ 61 ದಿನಗಳ ಯಾತ್ರೆ ಮಾಡಿದ್ದರು.
ಸುದ್ದಿಗೋಷ್ಠಿಯಲ್ಲಿ ಪ್ರಕಾಶ್ ಶೆಟ್ಟಿ, ಕಡಬ ದಿನೇಶ್ ರೈ, ಜಿವಿಎಸ್ ಉಳ್ಳಾಲ ಉಪಸ್ಥಿತರಿದ್ದರು.