ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ: ಫಡ್ನವೀಸ್

Update: 2018-05-24 14:27 GMT

ಮುಂಬೈ,ಮೇ 24: ಪೆಟ್ರೋಲ್ ಮತ್ತು ಡೀಸೆಲ್‌ಗಳನ್ನು ಜಿಎಸ್‌ಟಿ ವ್ಯಾಪ್ತಿಗೊಳಪಡಿಸಲು ಸಹಮತವನ್ನು ಮೂಡಿಸುವಲ್ಲಿ ಕೇಂದ್ರವು ಯಶಸ್ವಿಯಾದರೆ ಇಂಧನ ಬೆಲೆಗಳು ಇಳಿಕೆಯಾಗಲಿವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಗುರುವಾರ ಇಲ್ಲಿ ಹೇಳಿದರು. ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಜಾಗತಿಕ ಕಚ್ಚಾ ತೈಲಬೆಲೆಗಳು ನಿರ್ಧರಿಸುತ್ತವೆ ಎಂದು ಅವರು ಬೆಟ್ಟು ಮಾಡಿದರು.

ಇಂಧನ ಬೆಲೆಗಳನ್ನು ತಗ್ಗಿಸಲು ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಕಾರ್ಯ ಪಡೆಯೊಂದು ಈಗಾಗಲೇ ಕಾರ್ಯನಿರತವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಗಳನ್ನು ಜಿಎಸ್‌ಟಿ ವ್ಯಾಪ್ತಿಗೊಳಪಡಿಸಲು ಸಾಧ್ಯವಾದರೆ ಅವುಗಳ ದರಗಳು ಇಳಿಯಲಿವೆ ಎಂದ ಅವರು,ನಿರ್ಧಾರವೊಂದನ್ನು ತೆಗೆದುಕೊಳ್ಳುವ ಮುನ್ನ ಜಿಎಸ್‌ಟಿ ಮಂಡಳಿಯೂ ಆದಾಯನಷ್ಟದಂತಹ ವಿಷಯಗಳನ್ನು ಪರಿಶೀಲಿಸಬೇಕಾಗುತ್ತದೆ ಎಂದರು.

ಪೆಟ್ರೋಲ್ ಮತ್ತು ಡೀಸೆಲ್‌ಗಳನ್ನು ಜಿಎಸ್‌ಟಿ ವ್ಯಾಪ್ತಿಗೊಳಪಡಿಸುವ ಬಗ್ಗೆ ಎಲ್ಲ ರಾಜ್ಯಗಳ ಹಣಕಾಸು ಸಚಿವರೊಡನೆ ಮಾತುಕತೆಗಳು ನಡೆಯುತ್ತಿವೆ. ಇದಕ್ಕೆ ಮಹಾರಾಷ್ಟ್ರ ಸರಕಾರವು ಈಗಾಗಲೇ ತನ್ನ ಒಪ್ಪಿಗೆಯನ್ನು ನೀಡಿದೆ. ಆದರೆ ಇತರ ರಾಜ್ಯಗಳು ಈವರೆಗೆ ಒಪ್ಪಿಗೆಯನ್ನು ಸೂಚಿಸಿಲ್ಲ ಎಂದು ಫಡ್ನವೀಸ್ ತಿಳಿಸಿದರು.

ಈಗ ಪೆಟ್ರೋಲ್ ಮತ್ತು ಡೀಸಿಲ್‌ಗಳಿಗೆ ತೆರಿಗೆಗಳ ಮೇಲೆ ತೆರಿಗೆಗಳನ್ನು ವಿಧಿಸಲಾಗುವುದರಿಂದ ದರಗಳು ಹೆಚ್ಚುತ್ತವೆ. ಜಿಎಸ್‌ಟಿಯಲ್ಲಿ ಒಂದೇ ತೆರಿಗೆಯನ್ನು ವಿಧಿಸಲಾಗುತ್ತದೆ. ಆದ್ದರಿಂದ ಇವು ಜಿಎಸ್‌ಟಿ ವ್ಯಾಪ್ತಿಗೆ ಬಂದರೆ ದರಗಳು ಇಳಿಯುತ್ತವೆ ಎಂದು ಅವರು ವಿವರಿಸಿದರು.

ತನ್ಮಧ್ಯೆ ಸತತ 11ನೇ ದಿನವಾದ ಗುರುವಾರವೂ ದೇಶಾದ್ಯಂತ ಇಂಧನ ಬೆಲೆಗಳಲ್ಲಿ ಏರಿಕೆಯಾಗಿದೆ. ರಾಜಧಾನಿ ದಿಲ್ಲಿಯಲ್ಲಿ ಮೇ 14ರಿಂದ ಪ್ರತಿ ಲೀ.ಪೆಟ್ರೋಲ್‌ಗೆ 2.84 ರೂ. ಮತ್ತು ಡೀಸಿಲ್‌ಗೆ 2.60 ರೂ.ಏರಿಕೆಯಾಗಿದೆ.

ಕೇಂದ್ರ ಸರಕಾರವು ಪ್ರತಿ ಲೀ.ಪೆಟ್ರೋಲ್‌ಗೆ 19.48 ರೂ. ಮತ್ತು ಡೀಸಿಲ್‌ಗೆ 15.33 ರೂ.ಅಬಕಾರಿ ಸುಂಕವನ್ನು ವಿಧಿಸುತ್ತಿದೆ. ರಾಜ್ಯ ಮಾರಾಟ ತೆರಿಗೆ ಅಥವಾ ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಾಗಿದೆ. ಇಂಧನ ಬೆಲೆಗಳು ಹೆಚ್ಚಿದಂತೆ ವ್ಯಾಟ್ ಕೂಡ ಹೆಚ್ಚುವುದರಿಂದ ರಾಜ್ಯಗಳಿಗೆ ಹೆಚ್ಚಿನ ಆದಾಯವನ್ನು ತರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News