ಸುಕ್ಮಾದಲ್ಲಿ ನಕ್ಸಲ್ ದಾಳಿಗೆ ಸಿಆರ್‌ಪಿಎಫ್ ಉಪನಿರೀಕ್ಷಕ ಬಲಿ

Update: 2018-05-24 14:35 GMT

ರಾಮಪುರ, ಮೇ 24: ಚತ್ತೀಸ್‌ಗಡದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ಸ್ಫೋಟಕ್ಕೆ ಸಿಆರ್‌ಪಿಎಫ್‌ನ ಕೋಬ್ರಾ ಪಡೆಯ ಓರ್ವ ಅಧಿಕಾರಿ ಮೃತಪಟ್ಟಿದ್ದು, ಇನ್ನೋರ್ವ ಸೈನಿಕ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಮುಂಜಾನೆ 7.45ರ ಹೊತ್ತಿಗೆ ಪುಸ್ವಾಡ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ವಿಶೇಷ ಪರಿಣತ ವಿಭಾಗ ಕೋಬ್ರಾ ಪಡೆಯ 206ನೇ ಬೆಟಾಲಿಯನ್ ಗಸ್ತು ತಿರುಗಾಟ ನಡೆಸುತ್ತಿದ್ದ ವೇಳೆ ಸಿಬ್ಬಂದಿ ಮಾವೋವಾದಿಗಳು ಮಣ್ಣಿನಡಿಯಲ್ಲಿ ಹೂತಿಟ್ಟ ಐಇಡಿ ಸಂಪರ್ಕಕ್ಕೆ ಬಂದಿದ್ದಾರೆ. ಇದರಿಂದ ಈ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಉಪನಿರೀಕ್ಷಕ ರಾಜೇಶ್ ಕುಮಾರ್ ಸಾವನ್ನಪ್ಪಿದರೆ ಪೇದೆ ಮಾಣಿಕ್ ತಿನ್ಪರೆ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ರಾಜೇಶ್ ಕುಮಾರ್‌ರನ್ನು ಚಿಂತಗುಫದಲ್ಲಿರುವ ಸಿಆರ್‌ಪಿಎಫ್ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಗಾಯಗೊಂಡಿದ್ದ ಇನ್ನೋರ್ವ ಜವಾನನನ್ನು ಹೆಲಿಕಾಪ್ಟರ್ ಮೂಲಕ ರಾಯ್‌ಪುರಕ್ಕೆ ಸಾಗಿಸಲಾಗಿದೆ. ನಕ್ಸಲರನ್ನು ಹತ್ತಿಕ್ಕಲು ಪುಸ್ವಾಡ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News