×
Ad

ತೂತುಕುಡಿ ಗೋಲಿಬಾರ್‌: ತನಿಖೆ ಕೋರಿ ದಿಲ್ಲಿ ಹೈಕೋರ್ಟ್‌ನಲ್ಲಿ ಮನವಿ

Update: 2018-05-24 20:14 IST

ಹೊಸದಿಲ್ಲಿ, ಮೇ 24: ಸ್ಟರ್ಲೈಟ್ ತಾಮ್ರದ ಕಾರ್ಖಾನೆಯನ್ನು ವಿರೋಧಿಸಿ ತೂತುಕುಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ವೇಳೆ ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೇರಿದೆ. ಈ ಮಧ್ಯೆ ಪ್ರತಿಭಟನಾಕಾರರ ಕಾನೂನುಬಾಹಿರ ಹತ್ಯೆಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಅಥವಾ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ನೇರ ಮಧ್ಯಪ್ರವೇಶಿಸಬೇಕೆಂದು ಕೋರಿ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಗುರುವಾರ ಮನವಿ ಸಲ್ಲಿಸಲಾಗಿದೆ.

ಹಿಂದುಳಿದ ವರ್ಗಗಳ, ಎಸ್ಸಿ/ಎಸ್ಟಿ ಮತ್ತು ಅಲ್ಪಸಂಖ್ಯಾತರ ರಾಷ್ಟ್ರೀಯ ಕೇಂದ್ರದ ರಾಷ್ಟ್ರೀಯ ಉಪಾಧ್ಯಕ್ಷ, ವಕೀಲ ಎ. ರಾಜರಾಜನ್ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ಉಚ್ಚ ನ್ಯಾಯಾಲಯವು ಶುಕ್ರವಾರದಂದು ನಡೆಸುವ ಸಾಧ್ಯತೆಯಿದೆ. ತೂತುಕುಡಿಯಲ್ಲಿ ನಡೆಯುತ್ತಿರುವ ಘಟನೆಗಳನ್ನು ನಿರ್ಲಕ್ಷಿಸಿರುವ ಹಕ್ಕುಗಳ ಆಯೋಗವು ತನ್ನ ಮನವಿಗೆ ಸ್ಪಂದಿಸಲು ನಿರಾಕರಿಸಿದೆ ಎಂದು ರಾಜರಾಜನ್ ತಿಳಿಸಿದ್ದಾರೆ. ಆಯೋಗವು ಕೇವಲ ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಯಿಂದ ಘಟನೆಯ ಕುರಿತು ವರದಿಯನ್ನು ಕೇಳಿದೆ. ಆದರೆ ತೂತುಕುಡಿಯಲ್ಲಿ ಪೌರಸಂಸ್ಥೆಗಳು ಮತ್ತು ಪೊಲೀಸ್ ಅಧಿಕಾರಿಗಳಿಂದಲೇ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ರಾಜರಾಜನ್ ಆರೋಪಿಸಿದ್ದಾರೆ.

ಪೊಲೀಸರು ಗೋಲಿಬಾರ್ ನಡೆಸುವ ಸಂದರ್ಭದಲ್ಲಿ ಈ ಬಗ್ಗೆ ಇರುವ ಕಾನೂನುಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದು ರಾಜರಾಜನ್ ದೂರಿದ್ದಾರೆ.

ತೂತುಕುಡಿ ಪ್ರತಿಭಟನೆ: ಸ್ಟಾಲಿನ್ ಪೊಲೀಸ್ ವಶ

ತೂತುಕುಡಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳ ಕಚೇರಿಯ ಮುಂದೆ ಧರಣಿನಿರತರಾಗಿದ್ದ ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ)ನ ಅದ್ಯಕ್ಷ ಎಂ.ಕೆ ಸ್ಟಾಲಿನ್‌ರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸ್ಟರ್ಲೈಟ್ ಕಾರ್ಖಾನೆ ಮುಚ್ಚುಗಡೆಗೆ ಆದೇಶ

ತೂತುಕುಡಿಯಲ್ಲಿರುವ ಸ್ಟರ್ಲೈಟ್ ಕೋಪರ್ ಸ್ಮೆಲ್ಟರ್ ಕಾರ್ಖಾನೆಯನ್ನು ಕೂಡಲೇ ಮುಚ್ಚುವಂತೆ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ (ಟಿಎನ್‌ಪಿಸಿಬಿ) ಬುಧವಾರ ಆದೇಶ ನೀಡಿದೆ. ಗುರುವಾರ ಬೆಳಿಗ್ಗೆಯಿಂದಲೇ ಕಾರ್ಖಾನೆಗೆ ನೀಡಲಾಗಿದ್ದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News