×
Ad

‘ಆಹಾರ ಸುರಕ್ಷತೆ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಂಡು ವರದಿ ನೀಡಿ’

Update: 2018-05-24 20:41 IST

ಉಡುಪಿ, ಮೇ 24: ತಂಬಾಕು ನಿಯಂತ್ರಣದ ಜೊತೆಗೆ ಆಹಾರ ಸುರಕ್ಷತೆ ಬಗ್ಗೆ ಜಿಲ್ಲಾ ಮಟ್ಟದ ಆಹಾರ ಸುರಕ್ಷತೆ ಸಮಿತಿ ಸ್ವಯಂಪ್ರೇರಿತವಾಗಿ ಕಾಳಜಿ ವಹಿಸಿ ಕ್ರಮತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.

ಗುರುವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಆಹಾರ ಸುರಕ್ಷತೆ ಸಭೆ, ಹಾಲಿನ ಗುಣಮಟ್ಟ ದ ಜಿಲ್ಲಾ ಮಟ್ಟದ ಸಮಿತಿ ಸಭೆ ಹಾಗೂ ನೀರಿನ ಘಟಕದ ಕಾರ್ಯ ನಿರ್ವಹಣೆಯ ಜಿಲ್ಲಾ ಮಟ್ಟದ ತನಿಖಾ ದಳದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಬೇಕರಿ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಇತರ ಜಿಲ್ಲೆಗಳಿಂದ ವರದಿಗಳು ಬಂದಿದ್ದು, ಗ್ರಾಹಕರು ಅಥವಾ ಸಾರ್ವಜನಿಕರಿಂದ ದೂರುಗಳಿಗಾಗಿ ಕಾಯದೆ ಸ್ವಯಂಪ್ರೇರಿತವಾಗಿ ಸಂಬಂಧಪಟ್ಟ ಅಧಿಕಾರಿಗಳು ದೂರು ದಾಖಲಿಸಿ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಮೇ 31ರಂದು ವಿಶ್ವ ತಂಬಾಕು ರಹಿತ ದಿನ ಆಚರಿಸುವ ಕುರಿತು ಚರ್ಚಿಸಿದ ಡಾ.ವಾಸುದೇವ ಉಪಾಧ್ಯಾಯ, ಪ್ರಸಕ್ತ ಸಾಲಿನ ಧ್ಯೇಯ ವಾಕ್ಯವಾದ ತಂಬಾಕು ಮತ್ತು ಹೃದಯದ ಕಾಯಿಲೆಗಳ ಕುರಿತು ಉದ್ಯಾವರದ ಟ್ರಿನಿಟಿ ಕೈಗಾರಿಕಾ ಸಂಸ್ಥೆಯಲ್ಲಿ ಜಾಗೃತಿ ಅಭಿಯಾನ ನಡೆಸಲು ನಿರ್ಧರಿಸಲಾಯಿತು.

ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾರ್ಯಕ್ರಮದ ಬಗ್ಗೆ ಮಣಿಪಾಲ ಕೆಎಂಸಿಯ ಸಮುದಾಯ ವೈದ್ಯಕೀಯ ಆರೋಗ್ಯ ವಿಭಾಗ ನೀಡಿದ ವರದಿ ಯನ್ನು ಸಭೆಯಲ್ಲಿ ಮಂಡಿಸಲಾಯಿತು. ವರದಿಯಲ್ಲಿ ಕೆಎಂಸಿಯ ಡಾ. ಮುರಳೀಧರನ್ ಅವರು ತಂಬಾಕು ನಿಯಂತ್ರಣ ಕಾಯಿದೆ ಅನುಷ್ಠಾನದ ಜೊತೆಗೆ ತಂಬಾಕಿನಿಂದ ತಯಾರಿಸಲ್ಪಡುವ ಇತರೆ ಉಪಉತ್ಪನ್ನಗಳ ಬಗ್ಗೆಯೂ ಜಿಲ್ಲೆಯಲ್ಲಿ ಸಾಕಷ್ಟು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಂಬಾಕು ಮಾರಾಟ ಮಾಡುವ ಒಟ್ಟು 155 ಮಾರಾಟಗಾರರು ಹಾಗೂ 465 ಧೂಮಪಾನ ಮಾಡುವವರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಲಾಗಿದೆ ಎಂದರು.

ಟಿವಿ ಚಾನೆಲ್‌ಗಳಲ್ಲಿ ಬರುವ ಜಾಹೀರಾತುಗಳ ಬಗ್ಗೆ ಸಭೆಯ ಗಮನ ಸೆಳೆದ ಜಿಲ್ಲಾಧಿಕಾರಿ, ಈ ಬಗ್ಗೆ ಇಲಾಖೆಯ ಉನ್ನತ ಅಧಿಕಾರಿಗಳ ಗಮನಸೆಳೆಯಲು ಸೂಚಿಸಿದರು. ಅದೇ ರೀತಿ ಜಿಲ್ಲೆಯ ಕೆಲವೆಡೆ ಬ್ರಾಂಡೆಡ್ ಅಲ್ಲದ ಸಿಗರೇಟ್ ಗಳು ಪತ್ತೆಯಾಗಿರುವುದರ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಅಳವಡಿಸಲಾಗಿರುವ ಶುದ್ಧ ನೀರಿನ ಘಟಕದಲ್ಲಿ ವರ್ಷಕ್ಕೊಮ್ಮೆ ರಾಸಾಯಿನಿಕ ಪರೀಕ್ಷೆ ಮತ್ತು ಆರು ತಿಂಗಳಿಗೊಮ್ಮೆ ಮೈಕ್ರೊ ಬಯಾಲಜಿ ಪರೀಕ್ಷೆ ನಡೆಸಲೂ ಜಿಲ್ಲಾಧಿಕಾರಿ ಸೂಚಿಸಿದರು. ಹಾಗೂ ಹೊಟೇಲುಗಳು, ಬೀದಿ ಬದಿ ವ್ಯಾಪಾರಿಗಳು, ಬೇಕರಿಗಳನ್ನು ತಪಾಸಣೆ ಮಾಡಿ ಪ್ರತಿ ತಿಂಗಳಿ ಗೊಮ್ಮೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

ಅಪರ ಜಿಲ್ಲಾಧಿಕಾರಿ ಅನುರಾಧ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವೀಸ್ ಸೇರಿದಂತೆ ಆರೋಗ್ಯ ಇಲಾಖೆ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News