ಮೇ 28ರಿಂದ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ
ಉಡುಪಿ, ಮೇ 24: ಜಿಲ್ಲೆಯಲ್ಲಿ ಮೇ 28ರಿಂದ ಜೂನ್ 9ರವರೆಗೆ ತೀವ್ರತರ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಆಯೋಜಿ ಸಲಾಗಿದ್ದು, ಈ ಸಂಬಂಧ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಐಡಿಸಿಎಫ್ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಡಯೇರಿಯಾ ಪ್ರಕರಣಗಳ ಮಾಹಿತಿ ಯನ್ನು ಪಡೆದರು.
ಈವರೆಗೆ ಜಿಲ್ಲೆಯಲ್ಲಿ ಡಯೇರಿಯಾದಿಂದ ಯಾರೂ ಮೃತ ಪಟ್ಟಿಲ್ಲ.ಈ ಬಾರಿ ಕಾರ್ಯಕ್ರಮ ಆಯೋಜನೆಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆಯನ್ನು ಸಲ್ಲಿಸಲಾಗಿದೆ ಎಂದು ಡಾ.ಎಂ.ಜಿ.ರಾಮ ವಿವರಿಸಿದರು. ಓಆರ್‌ಎಸ್ ಮತ್ತು ಝಿಂಕ್‌ಗಳನ್ನು ಸೇವಿಸುವ ಬಗ್ಗೆ ಸಂಬಂಧಪಟ್ಟವರಿಗೆ ತರಬೇತಿ ನೀಡಲಾಗಿದೆ ಎಂದರು.
ಔಷದಿ ಸೇವಿಸುವ ಬಗ್ಗೆ ಎಲ್ಲರಿಗೂ ಸ್ಪಷ್ಟ ಮಾಹಿತಿ ನೀಡಿ, ಅವಧಿ ಮೀರಿದ ಔಷಧ ಸೇವನೆ ಅಪಾಯಕಾರಿ ಎಂಬುದನ್ನೂ ತಿಳಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ವಕ್ಫ್ ಮಂಡಳಿ, ಕೆಎಂಸಿ ಮಣಿಪಾಲ, ಅಧ್ಯಕ್ಷರು ಐಎಂಎ/ಐಎಪಿ ಇವರ ಸಹಕಾರದಿಂದ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು.