×
Ad

ಬಡ ಕುಟುಂಬದ ಪ್ರತಿಭಾನ್ವಿತೆಗೆ ಸಿಎ ಆಗುವ ಕನಸು: ನೆರವಿಗೆ ಮನವಿ

Update: 2018-05-24 21:12 IST

ಶಿರ್ವ, ಮೇ 24: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 608 ಅಂಕಗಳೊಂದಿಗೆ ಶೇ.97.28 ಫಲಿತಾಂಶ ದಾಖಲಿಸಿದ ಶಿರ್ವ ಫೈಝಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಸನಾ ಕೌಸರ್ ಯಾವುದೇ ಕೋಚಿಂಗ್ ಸೌಲಭ್ಯಗಳಿಲ್ಲದೆ ತರಗತಿಯಲ್ಲಿ ಕಲಿಸಿದ ಪಾಠಗಳನ್ನು ಶಿಕ್ಷಕರ ಮಾರ್ಗ ದರ್ಶನದಲ್ಲಿ ಅಭ್ಯಾಸ ಮಾಡಿ ಶಾಲೆಯ ಶಿಕ್ಷಕರಿಂದಲೇ ಹೆಚ್ಚಿನ ತರಬೇತಿ ಪಡೆದು ಶಾಲೆಯ ಚರಿತ್ರೆಯಲ್ಲಿ ಪ್ರಥಮವಾಗಿ ಅತ್ಯಧಿಕ ಅಂಕ ದಾಖಲಿಸಿದ ವಿದ್ಯಾರ್ಥಿನಿ ಎಂಬ ಕೀರ್ತಿಗೆ ಪಾತ್ರಳಾಗಿದ್ದಾಳೆ.

ಗ್ರಾಮೀಣ ಪ್ರದೇಶದ ತೀರಾ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದು ಶಾಲೆಯ ಆಡಳಿತ ಮಂಡಳಿಯ ಸದಸ್ಯರ ಪ್ರಾಯೋಜಕತ್ವದಲ್ಲಿ ಕಠಿಣ ಪರಿಸ್ಥಿತಿ ಯಲ್ಲಿಯೂ ಕಷ್ಟಪಟ್ಟು ಕಲಿತು ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ್ದಾಳೆ. ಮೂಲತಃ ಅರಸೀಕೆರೆಯವರಾದ ಶಿರ್ವ ಮಸೀದಿ ಬಳಿಯ ನಿವಾಸಿ ಕೂಲಿ ಕಾರ್ಮಿಕ ಸಾಬ್‌ಜಾನ್ ಮತ್ತು ಮನೆಕೆಲಸದ ಜುಬೇದಾ ದಂಪತಿಯ ಇಬ್ಬರು ವುಕ್ಕಳಲ್ಲಿ ಕಿರಿಯವಳು ಸನಾ ಕೌಸರ್.

ಸಹೋದರ ಮಹಮ್ಮದ್ ಪರ್ವೇಝ್ ಕೂಡಾ ಪ್ರತಿಭಾವಂತ ವಿದ್ಯಾರ್ಥಿ ಯಾಗಿದ್ದು ಇದೇ ಶಾಲೆಯಲ್ಲಿ ದ್ವಿತೀಯ ಸ್ಥಾನ ಪಡೆದು ಉತ್ತೀರ್ಣನಾಗಿ ಪ್ರಸ್ತುತ ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದಾನೆ. ತಾವು ಕಲಿಯದಿದ್ದರೂ ಬಡತನದ ಮಧ್ಯೆಯೂ ಮಕ್ಕಳು ಉನ್ನತ ಶಿಕ್ಷಣ ಗಳಿಸಬೇಕು ಎಂಬುದೇ ಹೆತ್ತವರ ಹೆಬ್ಬಯಕೆ.

ತಂದೆ ಸಾಬ್‌ಜಾನ್ ಅವರ ಆರೋಗ್ಯ ಸರಿಯಾಗಿಲ್ಲ. ಕೂಲಿಕರ್ಮಿಕ ರಾಗಿಯೂ ಕೆಲಸವಿರದ ದಿನ ಒಪ್ಪೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ. ಶಾಲೆಯ ಪಕ್ಕದಲ್ಲಿರುವ ಬಾಡಿಗೆ ಮನೆಯಲ್ಲಿ ಕುಟುಂಬ ವಾಸವಾಗಿದ್ದು ಆರ್ಥಿಕ ಅಡಚಣೆಯ ನಡುವೆಯೂ ಸನಾ ಕೌಸರ್ ಸಿಎ ಕಲಿತು ಒಳ್ಳೆಯ ಉದ್ಯೋಗ ಮಾಡಬೇಕೆಂಬ ಕನಸು ಕಾಣುತ್ತಿದ್ದಾಳೆ. ಸಹೃದಯಿ ಶಿಕ್ಷಣಪ್ರೇಮಿ ಬಂಧುಗಳು ಈಕೆಯ ಕನಸಿಗೆ ಧನಾತ್ಮಕವಾಗಿ ಸ್ಪಂದಿಸಬಹುದು. ಈಕೆಯ ಮೊಬೈಲ್ ನಂ.- 8105249544

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News